

ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಯೋಜನೆ ಸೇವೆ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಗೆ ಮ್ಯಾರಥಾನ್ ಓಟದ ಮೂಲಕ ಗುರುವಾರ ಚಾಲನೆ ನೀಡಲಾಯಿತು.
ಮ್ಯಾರಥಾನ್ ಬಗ್ಗೆ ರಾಜ್ಯ ಯುವ ಪ್ರಶಸ್ತಿ ವಿಜೇತರು ಹಾಗೂ ವಕೀಲ ಚೆನ್ನಂಗಿಹಳ್ಳಿ ಶ್ರೀಕಾಂತ್ ಮಾತನಾಡಿ, ಹಾಕಿ ಮಾಂತ್ರಿಕ ಧ್ಯಾನ್ ಚಂದ್ ರವರ ಜನ್ಮದಿನದ ನೆನಪಿಗಾಗಿ ಹಾಗೂ ಅವರು ಕ್ರೀಡೆಗೆ ಸಲ್ಲಿಸಿದ ಸೇವೆಗಾಗಿ ಅವರ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಎಂದು ಘೋಷಿಸಲಾಗಿದೆ. ನಾವುಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶಿಸ್ತು, ಸಮಯವನ್ನು ಕಲಿಯುವುದರ ಜತೆಗೆ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಅಷ್ಟೇ ಅಲ್ಲ. ಅದರಲ್ಲಿ ಅಥ್ಲೆಟಿಕ್ಸ್ ಮುಖ್ಯವಾಗಿರುತ್ತದೆ. ಶಾಲಾ- ಕಾಲೇಜು ದಿನಗಳಲ್ಲಿ ಕಬ್ಬಡಿ, ಕೋ-ಕೋ, ಫುಟ್ಬಾಲ್, ಲಾಂಗ್ ಜಂಪ್, ಹೈ ಜಂಪ್, ಥ್ರೋ ಬಾಲ್, ಶಟಲ್ ಮುಂತಾದ ಕ್ರೀಡೆಗಳನ್ನು ಅಭ್ಯಸಿಸಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರವು ಕ್ರೀಡೆಯಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸಿದ್ದು, ಶೇಕಡ ಎರಡರಂತೆ ಮೀಸಲಾತಿಯನ್ನು ನೀಡುತ್ತದೆ. ಅದರಂತೆ ಹಾಸನ ಜಿಲ್ಲೆಯ ಹೆಮ್ಮೆಯ ಕ್ರೀಡಾಪಟು ಗಿರೀಶ್ ಅವರಿಗೆ ಆಡಳಿತ ಸೇವೆಯ ಎ ಶ್ರೇಣಿಯ ಅಧಿಕಾರಿಯನ್ನಾಗಿ ಮಾಡಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಇದೆ ವೇಳೆ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಸಿ.ಕೆ. ಹರೀಶ್, ಕ್ರೀಡಾಪಟುಗಳು, ತರಬೇತುದಾರರು ಸೇರಿದಂತೆ ಇತರರು ಉಪಸ್ಥಿತರಿದ್ದರು.