

ಚಿತ್ರದುರ್ಗ: ಕ್ರೀಡೆ ಜೀವನದ ಅವಿಭಾಜ್ಯ ಅಂಗವಾದಾಗ ಮಾತ್ರ ಈ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪ್ಯಾರಾ ಒಲಂಪಿಕ್ ಕ್ರೀಡಾಪಟು ಆರ್.ಟಿ.ಪ್ರಸನ್ನಕುಮಾರ್ ಸಲಹೆ ನೀಡಿದರು.
ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಮನಸ್ಸು, ದೇಹ ಒಂದಕ್ಕೊಂದು ಪೂರಕವಾಗಿ ಸದಾ ಲವಲವಿಕೆ, ಕ್ರಿಯಾಶೀಲವಾಗಿ ಇರಲು ಯಾವುದಾದರೊಂದು ಕ್ರೀಡೆಯಲ್ಲಿ ಆಸಕ್ತಿ ತೋರಬೇಕು. ಇದು ಜೀವನೋತ್ಸಾಹ ಇಮ್ಮಡಿಗೊಳಿಸುವುದರ ಜತೆಗೆ ಹೊಸ ಹುಮ್ಮಸ್ಸು, ಹರುಷ ಮೂಡಿಸುವಲ್ಲಿಯೂ ಸಹಕಾರಿಯಾಗಿದೆ ಎಂದರು.
ಚಾಂಪಿಯನ್‌ಶಿಪ್, ಕ್ರೀಡಾಕೂಟಗಳು ಆಯೋಜಿಸಿದಾಗ ಮಾತ್ರ ನಾವು ಕ್ರೀಡಾಪಟುಗಳನ್ನು ತಯಾರು ಮಾಡುತ್ತೇವೆ. ಆದರೆ, ನಿರಂತರವಾಗಿ ಜೀವನ ಶೈಲಿಯಾದಾಗ ಬದಲಾವಣೆ ಕಾಣಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ದಿನಗಳಲ್ಲಿ ಎಲ್ಲರೂ ಒಂದಿಲ್ಲೊಂದು ರೀತಿಯ ಒತ್ತಡ ಅನುಭವಿಸುತ್ತಿದ್ದಾರೆ. ಅದನ್ನು ಮೀರಿ ಬೆಳೆಯಲು ಕ್ರೀಡೆ ತುಂಬಾ ಸಹಕಾರಿ. ನಮ್ಮೊಳಗಿನ ಜಂಜಾಟ ಮರೆತು ಆಟದ ಮೈದಾನಕ್ಕೆ ಇಳಿದಾಗ ಗೆಲುವು ಸಾಧಿಸುವ ಛಲ, ಕೆಚ್ಚೆದೆ, ಆತ್ಮವಿಶ್ವಾಸ ತನ್ನಿಂತಾನೇ ಮೂಡುತ್ತದೆ. ಈ ಮೂಲಕ ಸಾಧನೆಗೂ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ಸ್ಪರ್ಧೆಗಳಲ್ಲಿ ಪಾಲ್ಗೊಂಡಾಗ ಮಾತ್ರ ಎದುರಾಳಿಯನ್ನು ಮಾನಸಿಕ, ದೈಹಿಕ ಹಾಗೂ ಕೌಶಲದ ಮೂಲಕ ಹೇಗೆ ಎದುರಿಸಬೇಕು ಎಂಬುದನ್ನು ಕ್ರೀಡೆ ಕಲಿಸಿಕೊಡಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ಮಾತನಾಡಿ, ವಾರ್ಷಿಕ ಕ್ರೀಡಾಕೂಟ ಪೊಲೀಸರಿಗೆ ಒಂದು ರೀತಿಯ ಹಬ್ಬವಿದ್ದಂತೆ. ಎರಡು ದಿನ ನಡೆಯಲಿರುವ ವಿವಿಧ ಸ್ಪರ್ಧೆಗಳಲ್ಲಿ ಒತ್ತಡ ಮರೆತು, ಸಹೋದ್ಯೋಗಿಗಳೊಂದಿಗೆ ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಿ. ನಿಮ್ಮ ವ್ಯಾಪ್ತಿಯ ಉಪವಿಭಾಗಗಳಿಗೆ ಹೆಮ್ಮೆ ತರುವ ನಿಟ್ಟಿನಲ್ಲಿ ಸ್ಪೂರ್ತಿದಾಯಕ ಪ್ರದರ್ಶನ ನೀಡಿ ಎಂದು ಸಲಹೆ ನೀಡಿದರು.
ಇದೇ ವೇಳೆ 400 ಮೀಟರ್ ಓಟ ಸೇರಿ ವಾಲಿಬಾಲ್, ರಿಲೆ, ಗುಂಡು ಎಸೆತ ಸ್ಪರ್ಧೆಗಳು ನಡೆದವು. ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಪಾಪಣ್ಣ, ಡಿಎಆರ್‌ನ ಗಣೇಶ್, ಉಪವಿಭಾಗಗಳ ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ, ಸಿಬ್ಬಂದಿ ಇತರರಿದ್ದರು.