

ಬಸವಕಲ್ಯಾಣ: ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸುವ ಜತೆಗೆ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಶಿಕ್ಷಕರಿಂದ ನಡೆಯಲಿ ಎಂದು ಶಾಸಕ ಶರಣು ಸಲಗರ ಹೇಳಿದರು.
ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆಶ್ರಯದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವಕಲ್ಯಾಣ ಹಾಗೂ ಹುಲಸೂರು ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಒಬ್ಬ ಶ್ರೇಷ್ಠ ಕ್ರೀಡಾ ಪಟುವನ್ನು ಜಗತ್ತು ಗುರುತಿಸುತ್ತದೆ. ಇಂಥ ಶಕ್ತಿ ಕ್ರೀಡೆಗಿದೆ. ಇಲ್ಲಿಯ ವಿದ್ಯಾರ್ಥಿಗಳು ಉತ್ತಮ ಕ್ರೀಡಾ ಪಟುಗಳಾಗಿ ತಾಲೂಕಿಗೆ ಕೀರ್ತಿ ತರಲಿ. ಓದಿನ ಜತೆಗೆ ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಮುಖ್ಯ. ಮಕ್ಕಳು ಹೆಚ್ಚಿನ ಅಂಕಗಳ ಹಿಂದೆ ಬಿದ್ದು, ಕ್ರೀಡೆಗಳ ಕಡೆಗೆ ವಿಮುಖರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬಸವಕಲ್ಯಾಣ ಕ್ಷೇತ್ರದಲ್ಲಿ ಬಹುತೇಕ ಶಾಲೆಗಳಲ್ಲಿ ಆಟದ ಮೈದಾನದ ಸೌಲಭ್ಯವಿದ್ದು, ಕ್ರೀಡೆಗಳಿಗೆ ಅಗತ್ಯವಿದ್ದರೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಕೆಕೆಆರ್‌ಡಿಬಿಯಿಂದ ಅನುದಾನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮೇತ್ರೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಅಕ್ಕಣ್ಣ, ಹುಲಸೂರ ತಾಲೂಕು ಅಧ್ಯಕ್ಷ ರಾಜಪ್ಪ ನಂದೋಡೆ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯೋಗರಾಜ.ಕೆ, ಪ್ರಮುಖರಾದ ಸೂರ್ಯಕಾಂತ ಅಡಕೆ, ತುಕಾರಾಮ, ಲಕ್ಷö್ಮಣ ಹೆಂಬಾಡೆ. ನಾಗರೆಡ್ಡಿ ಕಲ್ಲೂರೆ, ಶಿವರಾಜ ಕನಕಟ್ಟೆ, ಮನೋಹರ ಕಂಟೆಕೋರೆ ಇತರರಿದ್ದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಪಾಟೀಲ್ ಸ್ವಾಗತಿಸಿದರೆ, ಶಿವಶಂಕರ ಪತಂಗೆ ನಿರೂಪಣೆ ಮಾಡಿದರು.