ಕ್ರೀಡಾಭಾರತಿಯಿಂದ ಜಿಲ್ಲಾಮಟ್ಟದ ದೇಸಿ ಆಟಗಳ ಕ್ರೀಡಾಕೂಟ

Published on

ಮೈಸೂರು: ಕ್ರೀಡಾಭಾರತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ಡಿ.12ರಂದು ಜಿಲ್ಲಾಮಟ್ಟದ ದೇಸಿ ಆಟಗಳ ಕ್ರೀಡಾಕೂಟ ಆಯೋಜಿಸಲಾಗಿದೆ.
ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಭಾಗಿತ್ವದಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಕ್ರೀಡಾಕೂಟವನ್ನು ಅಂದು ಬೆಳಗ್ಗೆ 8.30ಕ್ಕೆ ಕ್ರೀಡಾಭಾರತಿ ದಕ್ಷಿಣ ಭಾರತ ಸಂಯೋಜಕ ಚಂದ್ರಶೇಖರ್ ಜಾಗೀರ್ದರ್ ಉದ್ಘಾಟಿಸುವರು. ಮೈಸೂರು ವಿಶ್ವವಿದ್ಯಾಲಯದ ಕುಲಪತಿ (ಪ್ರಭಾರ) ಪ್ರೊ.ಎಚ್.ರಾಜಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಎನ್‌ಸಿಸಿ ಕಮಾಂಡರ್ ಪ್ರಮೀಳಾ ಕುಂವರ್, ವಿದ್ಯಾವಿಕಾಸ ಸಂಸ್ಥೆ ಕಾರ್ಯದರ್ಶಿ ಕವೀಶ್‌ಗೌಡ, ಈಜುಪಟು ರಾಮಚಂದ್ರೇಗೌಡ ಇತರರು ಭಾಗವಹಿಸುವರು ಎಂದು ಮೈಸೂರು ವಿಭಾಗ ಸಂಚಾಲಕ ಮಹೇಂದ್ರಪ್ರಸಾದ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಪರ್ಧಾಕೂಟಕ್ಕೆ ಜಿಲ್ಲೆಯ 21 ಶಾಲೆಗಳ 900 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಕೂಟದಲ್ಲಿ ಪಥ ಸಂಚಲನ, ಸ್ಕೂಲ್ ಬ್ಯಾಂಡ್ ಸ್ಪರ್ಧೆಯ ಜತೆಗೆ ದೇಸಿ ಕ್ರೀಡೆಗಳಾದ ಲಗೋರಿ ಹಾಗೂ ಹಗ್ಗ ಜಗ್ಗಾಟವೂ ಇರಲಿದೆ. ಮಧ್ಯಾಹ್ನ 1.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಜೋಧ್‌ಪುರದ ಸಂತ ಸಮಾಜದ ಅಧ್ಯಕ್ಷ ಚೇತನ್ ಗಿರಿ ಮಹಾರಾಜ್ ಅವರು ಭಾಗವಹಿಸುವರು. ಪ್ಯಾರಾ ಅಥ್ಲೀಟ್ ಪದ್ಮಶ್ರೀ ಕೆ.ವೈ.ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಾಮೂಹಿಕ ಯೋಗವ್ಯೆಹ ರಚನಾ ಸ್ಪರ್ಧೆ ವಿಜೇತರಿಗೆ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ಅವರು ಬಹುಮಾನ ವಿತರಿಸಲಿದ್ದಾರೆ. ಪ್ರಥಮ ಬಹುಮಾನ ಪಡೆದ ಮೈಸೂರಿನ ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್ ಒಂದು ಲಕ್ಷ ರೂ., ದ್ವಿತೀಯ ಬಹುಮಾನ ಪಡೆದ ಪೊಲೀಸ್ ಪಬ್ಲಿಕ್ ಶಾಲೆಗೆ 50 ಸಾವಿರ ರೂ., ತೃತೀಯ ಬಹುಮಾನ ಪಡೆದ ಹರಿ ವಿದ್ಯಾಲಯಕ್ಕೆ 25 ಸಾವಿರ ರೂ. ನೀಡಲಾಗುವುದು ಎಂದು ಹೇಳಿದರು.
ಮಕ್ಕಳಲ್ಲಿ ಕ್ರೀಡೆ ಹಾಗೂ ಕ್ರೀಡಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ರೀಡಾ ಭಾರತಿಯು ಕ್ರೀಡಾ ಜ್ಞಾನ ಪರೀಕ್ಷೆಯು ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಫೆಬ್ರವರಿ ತಿಂಗಳ ಮೊದಲ ವಾರ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
5ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳವರೆಗೂ ಪರೀಕ್ಷೆ ಬರೆಯಲು ಅವಕಾಶವಿದ್ದು, ಜನವರಿ 15ರವರೆಗೆ ನೋಂದಣಿಗೆ ಅವಕಾಶವಿದೆ. ಮಾಹಿತಿಗೆ ಮೊ.8147472333 ಸಂಪರ್ಕಿಸಬಹುದು ಎಂದರು. ಕ್ರೀಡಾ ಭಾರತಿಯ ಜಿಲ್ಲಾಧ್ಯಕ್ಷ ಅಮೃತ್ ಪುರೋಹಿತ್, ವಿಭಾಗ ಸಂಯೋಜಕರಾದ ಆರ್.ರಂಗನಾಥ್, ಪರಮೇಶ್, ಮಹಿಳಾ ಪ್ರಮುಖರಾದ ರಶ್ಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net