ಕ್ರೀಡಾಪಟುಗಳಿಗೆ ಅದ್ದೂರಿ ಸ್ವಾಗತ

A grand welcome for athletes
ಗೊಳಸಂಗಿಯಲ್ಲಿ ಕ್ರೀಡಾಪಟುಗಳಾದ ವಿನಾಯಕ ಕಲಾದಗಿ, ಆಕಾಶ ಹಳೆರೊಳ್ಳಿ, ಅನೀಲ ಮೇಲಿನಮನಿ ಅವರನ್ನು ಬನಶಂಕರಿ ದೇವಾಲಯದ ಬಳಿ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು.
Published on

ಗೊಳಸಂಗಿ: ನೇಪಾಳದಲ್ಲಿ ಜು.8, 9, 10, 11 ಮತ್ತು 12 ರಂದು 19 ವರ್ಷದೊಳಗಿನ ಬಾಲಕರಿಗಾಗಿ ನಡೆದ ಅಂತಾರಾಷ್ಟ್ರೀಯ ಖೋಖೋ ಪಂದ್ಯಾವಳಿಯಲ್ಲಿ ಪಾಕಿಸ್ಥಾನ ವಿರುದ್ಧ ಫೈನಲ್ ಪಂದ್ಯ ಗೆದ್ದ ಭಾರತ ತಂಡದಲ್ಲಿದ್ದ ಗೊಳಸಂಗಿಯ ಇಬ್ಬರು ಆಟಗಾರರು ತವರೂರಲ್ಲಿ ಗೊಳಸಂಗಿಗೆ ಭಾನುವಾರ ಸಂಜೆ ಆಗಮಿಸಿದಾಗ ಗ್ರಾಮಸ್ಥರು ಅದ್ದೂರಿ ಸ್ವಾಗತ ಮಾಡಿದರು.

ಕ್ರೀಡಾಪಟುಗಳಾದ ವಿನಾಯಕ ಕಲಾದಗಿ, ಆಕಾಶ ಹಳೆರೊಳ್ಳಿ ಅವರು ರಾಷ್ಟ್ರೀಯ ಹೆದ್ದಾರಿ-50ರ ಮಾರ್ಗವಾಗಿ ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ನೂರಾರು ಯುವಕರು ಸಂಭ್ರಮದಿಂದ ಬರಮಾಡಿಕೊಂಡರು. ಮಹಾತ್ಮಗಾಂಧಿ ವೃತ್ತ, ಗ್ರಾಮ ಪಂಚಾಯಿತಿ, ಬಸವೇಶ್ವರ ದೇವಸ್ಥಾನ ಮಾರ್ಗವಾಗಿ ಬನಶಂಕರಿ ದೇವಾಲಯದವರೆಗೆ ಅಂದಾಜು 2 ಕಿ.ಮೀ. ವರೆಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ಬನಶಂಕರಿ ದೇವಾಲಯದ ಬಳಿ ಮೆರವಣಿಗೆ ಸಮಾವೇಶಗೊಳ್ಳುತ್ತಿದ್ದಂತೆಯೇ ಮಾಲಾ ಬಂಟನೂರ ಮತ್ತಿತರರು ಕ್ರೀಡಾಪಟುಗಳಿಗೆ ಆರತಿ ಬೆಳಗಿ ಬರಮಾಡಿಕೊಂಡರು. ನಂತರ ಹಲವಾರು ಸಂಘಟನೆ, ಅಭಿಮಾನಿಗಳು ಸನ್ಮಾನಿಸಿದರು. ಇದರೊಟ್ಟಿಗೆ ತಂಡಕ್ಕೆ ಆಯ್ಕೆಗೊಂಡಿದ್ದರೂ ಕೆಲ ಅನಿವಾರ್ಯ ಕಾರಣದಿಂದ ಆಟದಲ್ಲಿ ಭಾಗಿಯಾಗದೆ ಇದ್ದ ಗ್ರಾಮದ ಮತ್ತೋರ್ವ ಯುವಕ ಅನೀಲ ಮೇಲಿನಮನಿ ಅವರಿಗೂ ಗ್ರಾಮಸ್ಥರು ಸನ್ಮಾನಿಸಿದರು.

ನೆಹರು ಯುವಕ ಸಂಘದ ಅಧ್ಯಕ್ಷ ಅಮರೇಶಗೌಡ ಪಾಟೀಲ ಮಾತನಾಡಿ, 16 ರಾಷ್ಟ್ರಗಳು ಭಾಗಿಯಾಗಿ ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಖೋಖೋ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ದೇಶದ ಕೀರ್ತಿ ಹೆಚ್ಚಿಸುವಲ್ಲಿ ನಮ್ಮ ಗ್ರಾಮದ ಯುವಕರ ಪಾತ್ರ ಅವರ್ಣನೀಯ. ಇಂಥ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದರೆ ಗ್ರಾಮ, ಜಿಲ್ಲೆ, ರಾಜ್ಯ ಮತ್ತು ದೇಶದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಲು ಸಾಧ್ಯ ಎಂದರು.

ಆಟದಲ್ಲಿ ಸೋಲು-ಗೆಲುವು ಸಾಮಾನ್ಯವಾದರೂ ಗೆಲುವೆಂಬುದು ನಮ್ಮನ್ನು ಜಗತ್ತಿಗೆ ಪರಿಚಯಿಸುತ್ತದೆ. ಅದೇ ರೀತಿ ಸೋಲು ಜಗತ್ತು ಹೇಗಿದೆ ಎಂಬುದನ್ನು ನಮಗೆ ಅನುಭವ ನೀಡುತ್ತದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿರುವುದು ರೋಮಾಂಚನಕಾರಿ ಅನುಭವವಾಗಿದೆ.
ವಿನಾಯಕ ಕಲಾದಗಿ, ಆಟಗಾರ, ಗೊಳಸಂಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net