

ದಾವಣಗೆರೆ: ಯಾವುದೇ ಕ್ರೀಡೆಗಳಿರಲಿ, ಕ್ರೀಡಾಳುಗಳು ಸ್ಪರ್ಧಾ ಮನೋಭಾವ, ಉತ್ಸಾಹದಿಂದ ಭಾಗವಹಿಸಬೇಕು ಎಂದು ಆಂತರಿಕ ಭದ್ರತಾ ಘಟಕದ ಡಿವೈಎಸ್ಪಿ ನಾಗೇಶ್ ಯು. ಐತಾಳ್ ಹೇಳಿದರು.
ದಾವಣಗೆರೆ ವಾಲಿಬಾಲ್ ಅಸೋಸಿಯೇಷನ್‌ನಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದೇವನಗರಿ ಕಪ್-ಹೊನಲು ಬೆಳಕಿನ ಪುರುಷರ ಜಿಲ್ಲಾ ಮಟ್ಟದ ವಾಲಿಬಾಲ್ ಟೂರ್ನಿ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ವಾಲಿಬಾಲ್, ಬಾಸ್ಕೆಟ್‌ಬಾಲ್‌ನಂತಹ ಕ್ರೀಡೆಗಳು ನಮ್ಮನ್ನು ಉತ್ಸಾಹದಿಂದ ಇರಲು ನೆರವಾಗಲಿವೆ ಎಂದು ತಿಳಿಸಿದರು.
ಕ್ರೀಡಾಕೂಟಗಳಲ್ಲಿ ದುರ್ವರ್ತನೆ ಪ್ರದರ್ಶನ ಮಾಡಬಾರದು. ತೀರ್ಪುಗಾರರ ತೀರ್ಪನ್ನು ಗೌರವಿಸಿ ಕ್ರೀಡೆಯಲ್ಲಿ ಭಾಗವಹಿಸಬೇಕು. ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಬೇಕಿದೆ ಎಂದು ಹೇಳಿದರು.
ಡಿಸಿಆರ್‌ಬಿ ಘಟಕದ ಡಿವೈಎಸ್ಪಿ ಬಸವರಾಜ್ ಮಾತನಾಡಿ ಕ್ರೀಡೆಗಳು ಮಾನವರನ್ನು ಸದಾ ಕ್ರಿಯಾಶೀಲರು ಹಾಗೂ ಶಿಸ್ತುಬದ್ಧರನ್ನಾಗಿ ಇರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಅಶಿಸ್ತು ಪ್ರದರ್ಶಿಸುವ ಕ್ರೀಡಾಪಟು, ಅಥವಾ ತಂಡಗಳನ್ನು ಸುಮಾರು 2 ವರ್ಷಗಳ ಕಾಲ ನಿಷೇಧಿಸಿದರೆ ತಕ್ಕ ಪಾಠ ಕಲಿಯಲಿದ್ದಾರೆ ಎಂದರು.
ಆಯೋಜಕರು ಉತ್ತಮ ರೀತಿಯಲ್ಲಿ ಪಂದ್ಯಾವಳಿ ನಡೆಸಬೇಕು. ನಿಸ್ಪ್ಪಕ್ಷಪಾತ ಮನೋಭಾವ ಇರಬೇಕು. ಒತ್ತಡಕ್ಕೆ ಒಳಗಾಗದೆ ತೀರ್ಪು ನೀಡುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡುವ ತಂಡಗಳಿಗೆ ಉತ್ತೇಜಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ್, ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಗುರುರಾಜ್, ನಟರಾಜ್, ಕೆ ಸಿ ಗಂಗರಾಜ್, ಐ. ಎಂ. ರಾಕೇಶ್, ಬಿ.ವಿ.ರಾಜಶೇಖರ, ಹರೀಶ್, ಪ್ರದೀಪ್, ಸಂದೀಪ್, ಸುಮಂತ್ ಇತರರಿದ್ದರು. ವಿವಿಧ ತಾಲೂಕಿನ 19 ತಂಡಗಳು ಕೂಟದಲ್ಲಿ ಭಾಗವಹಿಸಿದ್ದವು.