

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ದೈಹಿಕ-ಮಾನಸಿಕ ಆರೋಗ್ಯ ಸದೃಢವಾಗಲಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆಯ ಆದರ್ಶನಗರ ಸರ್ಕಾರಿ ಶಾಲೆ ಆವರಣದಲ್ಲಿ ಅರಿಶಿನಕುಂಟೆ ಸ್ಫೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಶನಿವಾರ ಅಯೋಜಿಸಿದ್ದ ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಕೂಟಗಳು ಹೆಚ್ಚಾಗಿ ನಡೆಯುತ್ತಿದ್ದು, ನಗರ ಪ್ರದೇಶದಲ್ಲಿ ಕಡಿಮೆಯಾಗಿವೆ. ನಗರ ಪ್ರದೇಶದಲ್ಲಿ ಹೆಚ್ಚು ಅರಿಶಿನಕುಂಟೆಯಲ್ಲಿ ನಡೆಯುತ್ತಿದೆ. ನಗರಗಳು ಬೆಳೆದಂತೆ ಪರಸ್ಪರ ಸಹಬಾಳ್ವೆ, ಸಹಕಾರ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಅರಿಶಿನಕುಂಟೆಯಲ್ಲಿ ಮೂಲ ನಿವಾಸಿಗಳು ಹಾಗೂ ವಲಸಿಗರು ಒಗ್ಗೂಡಿ, ಗ್ರಾಮದಲ್ಲಿ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು ಮಾತನಾಡಿ, ಬದಲಾದ ಜೀವನ ಶೈಲಿಯಿಂದಾಗಿ ಕ್ರೀಡೆ ಅತ್ಯಂತ ಅವಶ್ಯಕವಾಗಿದೆ. ನಿತ್ಯ ಯಾವುದಾದರೊಂದು ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ಕ್ರಿಯಾಶೀಲರಾಗಿ, ಏಕಾಗ್ರತೆ ಸಾಧಿಸಲು ಸಹಕಾರಿಯಾಗಲಿದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಕುಮಾರ್, ಲಕ್ಷ್ಮೀನಾರಾಯಣ್, ಮಾಜಿ ಸದಸ್ಯೆ ಹನುಮಂತಮ್ಮ, ಬೈರೇಗೌಡ, ನಗರಸಭೆ ಸದಸ್ಯ ಸಿ.ಪ್ರದೀಪ್, ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಎನ್.ಪಿ.ಹೇಮಂತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ಕೆ.ನಾಗರಾಜು, ಅರಿಶಿನಕುಂಟೆ ಸ್ಫೋರ್ಟ್ಸ್ ಅಸೋಸಿಯೇಷನ್‌ನ ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ರಮೇಶ್, ಜಂಟಿ ಕಾರ್ಯದರ್ಶಿ ಅಮಿತ್ ಶೆಣೈ, ಖಜಾಂಚಿ ಮಧುಸೂದನ್, ಸದಸ್ಯ ಕೆ.ಮಂಜುನಾಥ್, ದೇವರಾಜು, ಪ್ರಶಾಂತ್ ಕುಮಾರ್, ಬೈರೇಗೌಡ, ಸುರೇಶ್, ಕುಮಾರ್, ಪುರುಷೋತ್ತಮ, ಲೋಕೇಶ್, ಓಂಕಾರ್, ಮಹೇಶ್, ಹನುಮಂತರಾಜು, ಮನೋಜ್, ಹರೀಶ್ ಕುಮಾರ್ ಇದ್ದರು.
ವಿವಿಧ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆ: ಅರಿಶಿನಕುಂಟೆ ಸ್ಫೋರ್ಟ್ಸ್ ಅಸೋಸಿಯೇಷನ್ ಉದ್ಘಾಟನೆ ಪ್ರಯುಕ್ತ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಮತ್ತು ತ್ರೋಬಾಲ್ ಸ್ಪರ್ಧೆ ಸೇರಿ ಪುರುಷರಿಗೆ ವಾಲಿಬಾಲ್ ಸ್ಪರ್ಧೆ ಹಮ್ಮಿಕೊಂಡಿದ್ದು, ವಿಜೇತರಿಗೆ ಪ್ರಮಾಣ ಪತ್ರ, ಆಕರ್ಷಕ ಟ್ರೋಫಿ ನೀಡಲಾಯಿತು. ಕ್ರಿಕೆಟ್ ಪಂದ್ಯಾವಳಿಯಲ್ಲಿ 12 ತಂಡ ಭಾಗವಹಿಸಿದ್ದವು. ಪ್ರಥಮ ಬಹುಮಾನ ಪಡೆದ ರಂಗ ಇಲೆವೆನ್ ತಂಡವು 1.60 ಲಕ್ಷ ರೂ.ನಗದು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಜೆಬಿಸಿಸಿ ತಂಡವು 80 ಸಾವಿರ ನಗದು ಮತ್ತು ಟ್ರೋಫಿ, ತೃತೀಯ ಸ್ಥಾನ ಪಡೆದ ಸೃಷ್ಟಿ ತಂಡ 40 ಸಾವಿರ ಬಹುಮಾನ ಪಡೆಯಿತು ಎಂದು ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಕ್ರೀಡಾಂಗಣ ನಿರ್ಮಿಸಿ: ಅರಿಶಿನಕುಂಟೆಯಲ್ಲಿ ಕ್ರೀಡೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾಂಗಣ ವ್ಯವಸ್ಥೆ ಕಲ್ಪಿಸಿಕೊಂಡುವಂತೆ ಸ್ಫೋರ್ಟ್ಸ್ ಅಸೋಸಿಯೇಷನ್‌ನಿಂದ ಶಾಸಕರಿಗೆ ಮನವಿ ಮಾಡಲಾಯಿತು. ಇತ್ತೀಚೆಗೆ ಪಿಎಚ್‌ಡಿ ಪಡೆದ ವೇದಾವತಿ, ಗೋಲ್ಡ್ ಮೆಡಲ್ ಪಡೆದ ನವ್ಯಾ, ಕ್ರೀಡಾಪಟು ಅಶೋಕ್, ಪರಿಸರ ಪ್ರೇಮಿ ಜಯಮ್ಮ ಸೇರಿ ಕ್ರೀಡೆಯಲ್ಲಿ ಸಾಧನೆ ಮಾಡಿದ್ದ ಮಾರುತಿ ಶಾಲಾ ಮಕ್ಕಳನ್ನು ಸನ್ಮಾನಿಸಲಾಯಿತು.
ಶಾಸಕರಿಂದ ಭರವಸೆ: ಅಧಿಕಾರಕ್ಕೆ ಬಂದು ಒಂದೂವರೆ ವರ್ಷದಿಂದ ಅರಿಶಿಣಕುಂಟೆಗೆ ಯಾವುದೇ ಕಾಮಗಾರಿ ಮಾಡಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಆದರ್ಶನಗರ, ಅರಿಶಿನಕುಂಟೆಯ ದ್ವಿಪಥದ ರಸ್ತೆ ಕಾಮಗಾರಿ, ಉದ್ಯಾನವನ ಅಭಿವೃದ್ಧಿ, ರಸ್ತೆ , ಚರಂಡಿ ಸೇರಿ ವಿವಿಧ ಕಾಮಗಾರಿಗೆ ಸುಮಾರು 10 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ಆದಷ್ಟು ಶೀಘ್ರ ಭೂಮಿ ಪೂಜೆ ಮಾಡಲಾಗುವುದು. ಕ್ರೀಡಾಂಗಣ ವ್ಯವಸ್ಥೆಗೆ ಮನವಿ ಮಾಡಿದ್ದು, ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವುದಾಗಿ ಶಾಸಕ ಎನ್.ಶ್ರೀನಿವಾಸ್ ಮಾಹಿತಿ ನೀಡಿದರು.