

ಬಾಗಲಕೋಟೆ: ಮಹಾವಿದ್ಯಾಲಯದಲ್ಲಿ ಲಭ್ಯವಿರುವ ಕ್ರೀಡಾ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ, ಸೌಲಭ್ಯಗಳ ಕುರಿತು ನಡೆದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಠ್ಯದ ಜೊತೆಗ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗಿತ್ತಿದೆ. ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವದ ವಿಕಸನವನ್ನು ಮಾಡಿಕೊಳ್ಳಬೇಕು. ಪಠ್ಯಪೂರಕ ಚಟುವಟಿಕೆಗಳು ಉತ್ತಮ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಯನ್ನು ಪಡೆಯಲು ಸಹಕಾರಿಯಾಗಬಲ್ಲವು ಎಂದರು.
ಇಲ್ಲಿನ ಸೌಲಭ್ಯಗಳ ಪ್ರಯೋಜನವನ್ನು ಪಡೆದು ಬೇರೆ ಕಡೆ ನಡೆಯುವ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವದರ ಮೂಲಕ ಹೊಸ ಕೌಶಲಗಳನ್ನು ಬೆಳೆಸಿಕೊಳ್ಳಬಹುದು. ಹೊಸ ಕಲಿಕಾ ಅನುಭವವನ್ನು ಪಡೆಯಬಹುದು ಎಂದರು.
ಮಹಾವಿದ್ಯಾಲಯದ ವಿಶಾಲವಾದ ಮೈದಾನದಲ್ಲಿ ಆಡಬಹುದಾದ ವಿವಿಧ ಕ್ರೀಡೆಗಳ ಬಗ್ಗೆ ಕ್ರೀಡಾ ವಿಭಾಗದ ಎ.ಎಸ್.ಲಿಗಾಡೆ ಮಾಹಿತಿ ನೀಡಿದರು.
ಮಹಾವಿದ್ಯಾಲಯದಲ್ಲಿ ಲಭ್ಯವಿರುವ ಟೇಬಲ್ ಟೆನಿಸ್, ಶಟಲ್ ಬ್ಯಾಡ್ಮಿಂಟನ್ ಕೋರ್ಟ, ಚೆಸ್, ಕೇರಮ್ ಕೊಠಡಿ, ಮಲ್ಟಿಜಿಮ್ ಮುಂತಾದವುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಶಾಟ್ಪುಟ್,ಭಲ್ಲೆ ಎಸೆತ,ಟಿ.ಟಿ,ಬ್ಯಾಡ್ಮಿಂಟನ್ ಮುಂತಾದವುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಾಧ್ಯಾಪಕರೂ ಪಾಲ್ಗೊಂಡು ಗಮನ ಸೆಳೆದರು.
ಐ.ಕ್ಯೂ.ಎ.ಸಿ ಸಂಯೋಜಕ ಎಚ್.ಎಸ್.ಗಿಡಗಂಟಿ,ಎನ್.ಎಚ್.ಹಸಬಿ,ಎಂ.ಜೆ.ಬೆನಕಟ್ಟಿ ಮತ್ತಿತರರು ಇದ್ದರು.