ಕ್ರೀಡಾ ಗ್ರಾಮ ಅಭಿವೃದ್ಧಿಪಡಿಸಲು ಚಿಂತನೆ

KKRDB MEETING
Published on

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಕ್ರೀಡಾ ಗ್ರಾಮ ಅಭಿವೃದ್ಧಿಪಡಿಸಲು ಚಿಂತನೆ ನಡೆದಿದೆ ಎಂದು ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯಲ್ಲಿ ಮಂಡಳಿಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳ ಅನುಷ್ಠಾನಗೊಳಿಸುತ್ತಿರುವ ಏಜೆನ್ಸಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ಕಲಬುರಗಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮತ್ತು ಕೌಶಲ ವಿಶ್ವವಿದ್ಯಾಲಯ ಸ್ಥಾಪನೆಗೂ ಮಂಡಳಿ ಯೋಚಿಸುತ್ತಿದೆ ಎಂದರು.
ಪ್ರಸಕ್ತ ಸಾಲಿಗೆ ಸರ್ಕಾರ ಮಂಡಳಿಗೆ 1152 ಕೋಟಿ ರೂ. ಅನುದಾನ ನಿಗದಿಪಡಿಸಿದ್ದು, ಅದರಲ್ಲಿ ಶೇ.75 ಹಣ ಬಳಕೆ ಮಾಡಿ ನಾಲ್ಕನೇ ಕಂತಿನ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದೆ. 4-5 ವರ್ಷದಲ್ಲಿ ಸರ್ಕಾರಕ್ಕೆ 4ನೇ ಕಂತಿನ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದು ಇದೇ ಮೊದಲು. ಕಾಮಗಾರಿಗಳ ಆರ್ಥಿಕ ಮತ್ತು ಭೌತಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.
ನಗರದಲ್ಲಿ 24 ಗಂಟೆ ನಿರಂತರ ಕುಡಿವ ನೀರು ಯೋಜನೆ ಮತ್ತು ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ಏಕಕಾಲದಲ್ಲಿ ಒಳಚರಂಡಿ ಕಾಮಗಾರಿಗಳು ಕೈಗೊಳ್ಳಲು ನಗರ ನೀರು ಸರಬರಾಜು ಮಂಡಳಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.
ಕಾಮಗಾರಿ ಅನುಷ್ಠಾನ ಅಸಡ್ಡೆಗೆ ಕಿಡಿ
ಕಲಬುರಗಿ ಜಿಲ್ಲೆಯ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆಯಲ್ಲಿ 4-5 ವರ್ಷದ ಕಾಮಗಾರಿಗಳು ಇನ್ನು ಪ್ರಗತಿಯಲ್ಲಿರುವುದಕ್ಕೆ ಅಧ್ಯಕ್ಷರಾದ ರೇವೂರ ಅಸಮಾಧಾನ ವ್ಯಕ್ತಪಡಿಸಿದರು, ಅಸಡ್ಡೆ ಯಾಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಶ್ರೇಯೋಭಿವೃದ್ಧಿಗೆ ವಿಶೇಷ ಘಟಕ ಯೋಜನೆ/ ಗಿರಿಜನ ಉಪ ಯೋಜನೆಯಡಿ ಕೈಗೆತ್ತಿಕೊಳ್ಳುವ ಕಾಮಗಾರಿಗಳನ್ನು ಪ್ರಥಮಾದ್ಯತೆ ನೀಡಬೇಕು. ಆಯಾ ವರ್ಷದಲ್ಲಿ ಆಥರ್ಿಕ ಪ್ರಗತಿ ಸಾಧಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದರು.
ಮಂಡಳಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ ಮಾತನಾಡಿ, ಕೋವಿಡ್ದಿಂದಾಗಿ ಕ್ರಿಯಾ ಯೋಜನೆ ತಡವಾಗಿ ಅನುಮೋದನೆಗೊಂಡ 2020-21ನೇ ಸಾಲಿನ ಕಾಮಗಾರಿಗಳೆಲ್ಲವನ್ನು ಮಾ.31 ರೊಳಗೆ ಆರಂಭಿಸಬೇಕು. 2021-22ನೇ ಸಾಲಿನ ಕ್ರಿಯಾ ಯೋಜನೆಯನ್ನು ಏಪ್ರಿಲ್ 30 ರೊಳಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮಂಡಳಿ ನಿರ್ಧರಿಸಿದ್ದು, ಆಯಾ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಮಾತನಾಡಿ, ಲೋಕೋಪಯೋಗಿ, ಗ್ರಾಮೀಣ ಕುಡಿವ ನೀರು. ಪಂಚಾಯತ್ ರಾಜ್ ಸೇರಿ ಪ್ರಮುಖ ಅನುಷ್ಠಾನ ಏಜೆನ್ಸಿಗಳು, ಕಾಮಗಾರಿಗೆ ಹಂಚಿಕೆಯಾದ ಅನುದಾನದ ಪೈಕಿ ಕಡಿಮೆ ಅನುದಾನದಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದು ಬಹಳಷ್ಟು ಉದಾಹರಣೆಗಳಿದ್ದು, ಇಂತಹ ಪ್ರಕರಣಗಳಲ್ಲಿ ಖರ್ಚಾಗದೆ ಉಳಿದ ಅನುದಾನವನ್ನು ಮಂಡಳಿಗೆ ವಾಪಸ್ಸು ಕಳುಹಿಸಲು ಸೂಚಿಸಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಶಾಸಕರಾದ ಎಂ.ವೈ.ಪಾಟೀಲ್, ಸುಭಾಷ ಗುತ್ತೇದಾರ, ಕನ್ನೀಜ್ ಫಾತಿಮಾ, ಜಿಪಂ ಸಿಇಒ ಡಾ.ದಿಲೀಶ್ ಶಶಿ, ಡಿಸಿಪಿ ಕಿಶೋರ ಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net