

ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯುವ ಸಮುದಾಯವನ್ನು ಪ್ರೋತ್ಸಾಹಿಸುವ ಕೆಲಸ ಆಗುತ್ತಿಲ್ಲ. ಯಾವುದೇ ಹೊಸ ಯೋಜನೆಯನ್ನೂ ರೂಪಿಸುತ್ತಿಲ್ಲ ಎಂದು ಕರ್ನಾಟಕ ಯುವ ಸಂಘ-ಸಂಸ್ಥೆಗಳ ಒಕ್ಕೂಟ ದೂರಿದೆ.
ಕಳೆದ ಒಂದು ದಶಕದಿಂದ ರಾಜ್ಯದ ಯುವಕ ಸಂಘಗಳಿಗೆ ಯಾವುದೇ ಪ್ರೋತ್ಸಾಹ, ಅನುದಾನ ಸಿಗದೆ ಇಲಾಖೆ ನಿಷ್ಕ್ರಿಯವಾಗಿದ್ದು, ಕರ್ನಾಟಕ ಯುವ ಸಂಘ-ಸಂಸ್ಥೆಗಳ ಒಕ್ಕೂಟ ಹಲವು ಬೇಡಿಕೆಗಳೊಂದಿಗೆ ಇಲಾಖೆಗೆ ಆಗ್ರಹಪೂರ್ವಕ ಮನವಿ ಸಲ್ಲಿಸಲು ಮುಂದಾಗಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷ ವಿಜಯಕುಮಾರ್ ಸೊನಾರೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಲಾಖೆಯಿಂದ ಆಯೋಜಿಸುವ ಯುವಜನ ಮೇಳ ಹಾಗೂ ಯುವಜನೋತ್ಸವ ಕೆಲ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದು, ಇದನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಬೇಕು. ಜತೆಗೆ, ಜಿಲ್ಲಾ ಮಟ್ಟದ ಜಾನಪದ ಕಲೆಗಳ ತರಬೇತಿ ಶಿಬಿರಗಳ ಆಯೋಜನೆಗೂ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ಎಚ್.ಎಂ. ಶಿವಕುಮಾರ್ ಮಾತನಾಡಿ, ಒಕ್ಕೂಟ ಹಲವು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಯುವ ಚಟುವಟಿಕೆಗಳ ಜಾರಿಗೆ ಕಾರ್ಯೋನ್ಮುಖವಾಗಿದೆ. ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದ ಯುವ ಸಂಘ-ಸಂಸ್ಥೆಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಸ್ಥಗಿತವಾಗಿರುವ ಜಿಲ್ಲಾ ಹಾಗೂ ರಾಜ್ಯ ಯುವ ಪ್ರಶಸ್ತಿ ಪ್ರದಾನ, ಯುವ ಸಮ್ಮೇಳನ ಕಾರ್ಯಾಗಾರ, ಗ್ರಾಮೀಣ ಕ್ರೀಡೋತ್ಸವ ಮುಂದುವರಿಸಬೇಕು. ಯುವಜನರಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಾದ ಯುವ ಚೇತನ, ಯುವ ಪ್ರೇರಣ ಹಾಗೂ ಯುವ ಸಂವಹನ ಕಾರ್ಯಕ್ರಮ ಆಯೋಜಿಸಬೇಕು ಎಂದು ಒತ್ತಾಯಿಸಿದರು.
‘ನಮ್ಮೂರ ಶಾಲೆಗೆ ನಮ್ಮೂರ ಯುವಜನರು’ ಕಾರ್ಯಕ್ರಮವನ್ನು ಈ ಮೊದಲಿನಂತೆ ಯುವಕ ಸಂಘಗಳಿಗೆ ನೀಡಬೇಕು. ನೋಂದಾಯಿತ ಯುವಕ ಸಂಘಗಳಿಗೆ ಹಿಂದಿನಂತೆ ಕ್ರೀಡಾ ಉಪಕರಣ ನೀಡಿ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವುದು. ರಾಜ್ಯ, ರಾಷ್ಟ್ರ ಯುವ ಹಾಗೂ ಕ್ರೀಡಾ ಪ್ರಶಸ್ತಿ ಪುರಸ್ಕೃತರಿಗೆ ಉಚಿತ ಬಸ್‌ಪಾಸ್ ಹಾಗೂ ವಿಮಾ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ಯುವ ಸಂಘ-ಸಂಸ್ಥೆಗಳನ್ನು ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಬೇಕೆಂಬ ನಿಯಮವನ್ನು ಸಡಿಲಗೊಳಿಸಿ, ಈ ಹಿಂದಿನಂತೆ ಇಲಾಖೆಯಲ್ಲಿ ನೋಂದಾಯಿಸಿ ಕಾರ್ಯಚಟುವಟಿಕೆ ಮುಂದುವರಿಸಲು ಅವಕಾಶ ನೀಡಬೇಕು. ಜಿಲ್ಲಾವಾರು ಕ್ರಿಯಾಯೋಜನೆಗಳಿಗೆ ಏಕರೂಪ ನಿಯಮ ರೂಪಿಸುವುದು. ರಾಜ್ಯ ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಿಗೆ ನಿವೇಶನ ನೀಡಬೇಕು. 2018ನೇ ಸಾಲಿನ ರಾಜ್ಯ ಮಟ್ಟದ ಯುವಜನ ಮೇಳವನ್ನು ಶೀಘ್ರವೇ ಹಮ್ಮಿಕೊಳ್ಳಬೇಕು ಎಂದು ಒತ್ತಯಿಸಿದರು.
ಒಕ್ಕೂಟದ ಪದಾಧಿಕಾರಿಗಳಾದ ಪಣೀಂದ್ರ ಪ್ರಸಾದ್, ಸುಮಂತ್ ವಸಿಷ್ಠ, ಪ್ರೇಮ್ ಕುಮಾರ್, ಸತೀಶ್ ಮೇತ್ರಿ ಇದ್ದರು.