

ಧಾರವಾಡ: ಜಿಲ್ಲಾ ಮಟ್ಟದ 2021-22ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಸಂಘಟಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಧ್ಯಕ್ಷತೆಯಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಸಲಾಯಿತು.
ಜಿಲ್ಲಾಧಿಕಾರಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸಕ್ರಿಯ ಪ್ರಕರಣ ಹೆಚ್ಚುತ್ತಿವೆ. ಜಿಲ್ಲಾಡಳಿತ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಿದೆ. ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ನೋಂದಣಿ ಪ್ರಾರಂಭಿಸಬಹುದು. ಕೋವಿಡ್ ಹೆಚ್ಚಾದರೆ ಕ್ರೀಡಾಕೂಟ ಮುಂದೂಡಲಾಗುವುದು. ಆರ್ಥಿಕ ವೆಚ್ಚ ಮಾಡದೆ ಕ್ರೀಡಾಕೂಟಕ್ಕೆ ಆಂತರಿಕ ಸಿದ್ಧತೆ ಮಾಡಿಕೊಳ್ಳಿ. ಕೋವಿಡ್ ಹೆಚ್ಚಳವಾಗದಿದ್ದರೆ ನಿಗದಿಯಂತೆ ಜ. 27, 28 ಹಾಗೂ 29ರಂದು ಕ್ರೀಡಾಕೂಟ ಆಯೋಜಿಸಲಾಗುವುದು. ಜಿಪಂ ಕ್ರೀಡಾ ಘಟಕ ವೆಚ್ಚದಲ್ಲಿ 5 ಲಕ್ಷ ರೂ. ಅನುದಾನ ನೀಡಲಾಗುವುದು ಎಂದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡಾಕೂಟಕ್ಕೆ ಎಲ್ಲ ಇಲಾಖೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.