

ಚಿಕ್ಕಮಗಳೂರು: ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಮಂಗಳವಾರ ಒಂದು ದಿನ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಯಾಗಿ ರಮ್ಯಾ ಬೊಗಸೆ ಕರ್ತವ್ಯ ನಿರ್ವಹಿಸಿದರು.
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಒಂದು ದಿನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನಗರದ ಐಡಿಎಸ್ಜಿ ಕಾಲೇಜಿನ ಪ್ರಥಮ ಎಂಎ ವಿದ್ಯಾರ್ಥಿನಿ ರಮ್ಯಾ ಬೊಗಸೆ ಆಯ್ಕೆಯಾಗಿದ್ದರು. ಅವರನ್ನು ಒಂದು ದಿನದ ಕ್ರೀಡಾಧಿಕಾರಿಯಾಗಿ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣಕ್ಕೆ ಕ್ರೀಡಾಧಿಕಾರಿ ಮಂಜುಳಾ ಹುಲ್ಲಹಳ್ಳಿ ಹಾಗೂ ಇತರ ಅಧಿಕಾರಿಗಳು ಸ್ವಾಗತಿಸಿದರು.
ಅಧಿಕಾರ ಸ್ವೀಕರಿಸಿದ ರಮ್ಯಾ ಅವರು ಕ್ರೀಡಾಂಗಣಗಳನ್ನು ವೀಕ್ಷಿಸಿ, ಕ್ರೀಡಾ ವಸತಿ ನಿಲಯ ಮತ್ತು ಯುವ ಸ್ಪಂದನ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದರು. ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಆ ಕಾಲೇಜಿನಿಂದ ಆಯ್ಕೆಯಾಗಿದ್ದ ಶೋಭಾ ಶಾಸ್ತ್ರಿ ಅವರೊಂದಿಗೆ ವೇದಿಕೆ ಹಂಚಿಕೊಂಡು, ಹೆಣ್ಣು ಮಕ್ಕಳ ಸಾಧನೆಗಳು ಮಹತ್ತರವಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಪಂ ಸಿಇಒ ಜಿ.ಪ್ರಭು ಅವರನ್ನು ಭೇಟಿಯಾದರು. ಇಬ್ಬರೂ ಅಧಿಕಾರಿಗಳು ರಮ್ಯಾ ಅವರಿಗೆ ಶುಭಾಶಯ ಕೋರಿದರು. ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ತಾಪಂ ಇಒಗಳೊಂದಿಗೆ ನಡೆಯುತ್ತಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದರು. ಸ್ವಾಮಿ ವಿವೇಕಾನಂದ ಸ್ವಸಹಾಯ ಸಂಘಗಳ ನಿರ್ವಹಣೆ ಮತ್ತು ಬ್ಯಾಂಕುಗಳಲ್ಲಿ ಶೀಘ್ರದಲ್ಲಿ ಖಾತೆ ತೆರೆಯುವ ಕುರಿತು ಸಂಪೂರ್ಣ ಸಹಕಾರ ನೀಡುವಂತೆ ತಾಪಂ ಇಒಗಳಿಗೆ ಜಿಪಂ ಸಿಇಒ ಮೂಲಕ ನಿರ್ದೇಶನ ಕೊಡಿಸಿದರು.