

ಹುಬ್ಬಳ್ಳಿ: ಕರೊನಾ 2ನೇ ಅಲೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕಳೆದ ಮಂಗಳವಾರ ರಾತ್ರಿಯಿಂದ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದರಿಂದ ಸಾಕಷ್ಟು ವಹಿವಾಟು-ಚಟುವಟಿಕೆಗಳಿಗೆ ನಿರ್ಬಂಧವಿದ್ದರೂ ಕ್ರೀಡಾ ಅಭ್ಯಾಸಕ್ಕೆ ಮಾತ್ರ ಯಾವುದೇ ಅಡೆತಡೆಯಿಲ್ಲ. ಕ್ರೀಡಾಪಟುಗಳು ಸುರಕ್ಷಾ ಕ್ರಮಗಳನ್ನು ಅನುಸರಿಸಿ ಧೈರ್ಯದಿಂದ ಅಭ್ಯಾಸದಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಹುಬ್ಬಳ್ಳಿ- ಧಾರವಾಡದ ಹಲವು ಕಡೆಗಳಲ್ಲಿ ಮಕ್ಕಳು ನಿತ್ಯವೂ ಕ್ರೀಡಾ ಅಭ್ಯಾಸದಲ್ಲಿ ತೊಡಗಿದ್ದಾರೆ.
ಕರ್ನಾಟಕ ಸರ್ಕಾರ ಜಾರಿಗೊಳಿಸಿದ ಮಾರ್ಗಸೂಚಿಯಲ್ಲಿ (ಕ್ರಮ ಸಂಖ್ಯೆ 2ಜಿ) ಕ್ರೀಡಾಂಗಣ (ಸ್ಟೇಡಿಯಂ) ಹಾಗೂ ಮೈದಾನದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡದೆ ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸಬಹುದು ಹಾಗೂ ಅಭ್ಯಾಸ (ಪ್ರ್ಯಾಕ್ಟೀಸ್) ನಡೆಸಬಹುದು ಎಂದು ಸ್ಪಷ್ಟಪಡಿಸಲಾಗಿದೆ. ಇದಕ್ಕೆ ಬೆಳಗ್ಗೆ 6ರಿಂದ 10ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಎಂದಿನಂತೆ ಮಕ್ಕಳು, ಯುವಕರು ಪ್ರ್ಯಾಕ್ಟೀಸ್ ಮುಂದುವರಿಸಬಹುದು.
ಕರೊನಾ ಮಹಾಮಾರಿಯಿಂದ ಜಾರಿಗೊಳಿಸಲಾದ ಲಾಕ್ಡೌನ್, ಕರ್ಫ್ಯೂ, ನಿರ್ಬಂಧಗಳ ಪರಿಣಾಮವಾಗಿ ಶಾಲಾ-ಕಾಲೇಜ್ಗಳು ಬಂದ್ ಆಗಿ ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಆನ್ಲೈನ್ ಪಾಠದಿಂದ ಮೊಬೈಲ್ಫೋನ್ ಗೀಳು ಅಂಟಿಸಿಕೊಂಡಿದ್ದಾರೆ. ಮನೆಯಲ್ಲಿ ಕುಳಿತು ಬೋರ್ ಹೊಡೆದು ವಿಡಿಯೋ ಗೇಮ್ಲ್ಲಿ ತಲ್ಲೀನರಾದ ಪರಿಣಾಮ ಆರೋಗ್ಯ ಸ್ಥಿತಿ ಹದಗೆಡಿಸಿಕೊಂಡಿದ್ದಾರೆ. ಇಂಥ ಸಂದಿಗ್ಧ ಕಾಲಘಟ್ಟದಲ್ಲಿ ಮಕ್ಕಳು ಹೆಚ್ಚು ಹೆಚ್ಚು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಒಳಿತು.
ದಿನದ ಬಹುತೇಕ ಸಮಯ ಮನೆಯಲ್ಲಿಯೇ ಕುಳಿತು ಕಾಲ ಕಳೆದರೆ ಬೊಜ್ಜು ಬರುತ್ತದೆ. ಕ್ರೀಡೆಯಿಂದ ಉತ್ತಮ ಆರೋಗ್ಯ. ಬೆಳಗ್ಗೆ ಒಂದಿಷ್ಟು ಸಮಯ ಕ್ರೀಡಾ ಚಟುವಟಿಕೆಯಲ್ಲಿ ದೇಹ ದಂಡಿಸಿದರೆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸದೃಢತೆ ಹೆಚ್ಚುತ್ತದೆ. ಸಹಜವಾಗಿಯೇ ರೋಗ ನಿರೋಧಕ ಶಕ್ತಿ (ಇಮ್ಯುನಿಟಿ) ಅಧಿಕಗೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ.
ಬೆಳಗ್ಗೆ 6ರಿಂದ ವಾಕಿಂಗ್ಗೆ ಅವಕಾಶ ಕಲ್ಪಿಸಲಾಗಿದೆ. ಮಾರುಕಟ್ಟೆಗೆ ತೆರಳಲು ನಿರ್ಬಂಧ ಇಲ್ಲ. ಹೀಗಾಗಿ, ಪಾಲಕರು ಈ ಸಂದರ್ಭವನ್ನು ಬಳಸಿಕೊಂಡು ತಮ್ಮ ಮಕ್ಕಳನ್ನು ಕ್ರೀಡಾ ಅಭ್ಯಾಸಕ್ಕಾಗಿ ಮೈದಾನಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ, ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ಗಳು ಕ್ರಿಕೆಟ್ ತರಬೇತಿ ಹಾಗೂ ಪ್ರ್ಯಾಕ್ಟೀಸ್ಗೆ ಉತ್ತಮ ವ್ಯವಸ್ಥೆಯನ್ನು ಹೊಂದಿದೆ. ಇನ್ನು ಹಲವು ಅಕಾಡೆಮಿ, ಕ್ಲಬ್ಗಳು ಕೂಡ ಕ್ರೀಡಾ ಚಟುವಟಿಕೆಗಳನ್ನು ನಡೆಸುತ್ತವೆ.
ಕೆಲ ಅಧಿಕಾರಿಗಳಿಂದ ಅನಗತ್ಯ ಕಿರಿಕಿರಿ
ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ರೀಡೆಗೆ ಅವಕಾಶವಿದೆ. ಆದರೂ, ಹುಬ್ಬಳ್ಳಿಯಲ್ಲಿ ಕೆಲ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದು ಕ್ರೀಡಾ ಅಕಾಡೆಮಿಗಳಿಂದ ಆಕ್ಷೇಪ ವ್ಯಕ್ತಗೊಂಡಿದೆ. ಪ್ರ್ಯಾಕ್ಟೀಸ್ ಬಂದ್ ಮಾಡುವಂತೆ ಹೇಳುತ್ತಿದ್ದಾರೆ. ಸಂತೆ, ಮಾರುಕಟ್ಟೆಯಲ್ಲಿ ಆಗುವ ಜನದಟ್ಟಣೆಗಿಂತ ಇಲ್ಲಿ ಸೀಮಿತ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಇರುತ್ತಾರೆ. ಪರಸ್ಪರ ಅಂತರವನ್ನು ಕಾಯ್ದುಕೊಳ್ಳಲಾಗುತ್ತದೆ. ಮಕ್ಕಳು ಕ್ರೀಡೆಯಿಂದ ದೂರ ಉಳಿದರೆ ಕ್ರೀಡಾ ಕ್ಷೇತ್ರ ಮುಂದಿನ ದಿನಗಳಲ್ಲಿ ಪ್ರತಿಭೆಗಳ ದೊಡ್ಡ ಕೊರತೆಯನ್ನು ಎದುರಿಸಬೇಕಾಗುತ್ತದೆ ಎಂಬುದು ಕ್ರೀಡಾಪ್ರೇಮಿಗಳ ಅಳಲು.
ಇಂಥ ಲಾಕ್ಡೌನ್ ನಡುವೆಯೂ ಹುಡುಗರು ಧೈರ್ಯದಿಂದ ಪ್ರ್ಯಾಕ್ಟೀಸ್ಗೆ ಬರುತ್ತಿದ್ದಾರೆ. ಅವರಿಗೆ ನಾವು ಧೈರ್ಯ, ಮನೋಸ್ಥೈರ್ಯ ತುಂಬಬೇಕು. ಇಲ್ಲದಿದ್ದರೆ ಮಕ್ಕಳು ಟಿವಿ, ಮೊಬೈಲ್ಫೋನ್ಗೆ ಅಡಿಕ್ಟ್ ಆಗಿ ಬಿಡುತ್ತಾರೆ. ಪಾಲಕರು ಮಕ್ಕಳನ್ನು ಪ್ರ್ಯಾಕ್ಟೀಸ್ಗೆ ಕಳುಹಿಸುತ್ತಿದ್ದಾರೆ. ಇಲಾಖೆಯವರು ಸಹಕಾರ ನೀಡಬೇಕು.| ವೀರೇಶ ಉಂಡಿಎಂಡಿ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಹುಬ್ಬಳ್ಳಿ
ಬೆಳಗಿನ ಜಾವ ಹುಡುಗರು ಮನೆಯಿಂದ ಹೊರಗೆ ಬರಬೇಕು. ಸ್ಯಾನಿಟೈಸ್ ಮಾಡಿಕೊಂಡು ಪ್ರ್ಯಾಕ್ಟಿಸ್ಗೆ ಬಂದರೆ ಒಳ್ಳೆಯದು. ಬ್ಯಾಗ್ನಲ್ಲಿ ಸ್ಯಾನಿಟೈಸರ್ ಇಟ್ಟುಕೊಳ್ಳಲು ಹೇಳಿದ್ದೇವೆ. ಪಾಲಕರು ಬಂದು ಮಕ್ಕಳನ್ನು ಬಿಟ್ಟು ಹೋಗಬಹುದು. ಬೆಳಗ್ಗೆ 6ರಿಂದ 10ರ ವರೆಗೆ ಮಾರುಕಟ್ಟೆ ಪ್ರದೇಶದಲ್ಲಿ ಇರುವಷ್ಟು ಜನದಟ್ಟಣೆ ಇಲ್ಲಿ ಇರುವುದಿಲ್ಲ.|ಶಿವಾನಂದ ಗುಂಜಾಳಕೋಚ್, ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಹುಬ್ಬಳ್ಳಿ