

ಮೈಸೂರು: ಕ್ರಿಶ್ಚಿಯನ್ ಮಿಷನರಿ ಸಂಸ್ಥೆಗಳು ಉತ್ತಮ ಕೊಡುಗೆ ನೀಡುವ ಮೂಲಕ ಶೈಕ್ಷಣಿಕ ವಲಯದ ಪ್ರಗತಿಗೆ ನೆರವಾಗಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಭಿಪ್ರಾಯಪಟ್ಟರು.
ನಗರದ ಜಯಲಕ್ಷ್ಮೀಪುರಂನಲ್ಲಿರುವ ಸಂತ ಜೋಸೆಫ್ ಕಾಲೇಜಿನ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಶನಿವಾರ ಉದ್ಟಾಟಿಸಿ ಮಾತನಾಡಿದರು. ಸೆಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವುದು ಸಂತಸ ಕ್ಷಣವಾಗಿದೆ. ಮೈಸೂರು ನಗರದಲ್ಲಿ ಸಂತ ಫಿಲೋಮಿನಾ, ಟೆರೇಷಿಯನ್, ಸಂತ ಜೋಸೆಫ್‌ನಂತಹ ಹಳೆಯ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಇಂಗ್ಲಿಷ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಉತ್ತೇಜನ ಕೊಟ್ಟಿವೆ. ಇದು ಶಿಕ್ಷಣ ಪ್ರಗತಿಗೆ ಅನುಕೂಲವಾಗಿದೆ ಎಂದರು.
ಉತ್ತಮ ಶಿಕ್ಷಕನಾಗಬೇಕೆಂದರೆ, ಉತ್ತಮ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸುವಲ್ಲಿ ಆಸಕ್ತಿ ಇರಬೇಕು. ಅಂತಹ ಗುರುಗಳಿಂದ ಮಾತ್ರ ವಿದ್ಯಾರ್ಥಿಗಳನ್ನು ಒಳ್ಳೆಯ ವ್ಯಕ್ತಿಗಳನ್ನಾಗಿ ಸೃಷ್ಟಿಸಲು ಸಾಧ್ಯ. ಮುಂದಿನ 10 ವರ್ಷ ಕಳೆದಾಗ ಶಿಕ್ಷಕರನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಳ್ಳೆಯ ಶಿಕ್ಷಕ ಸಿಗುವುದು ಬಹಳ ಕಡಿಮೆ ಆಗಲಿದೆ ಎಂದರು.
ಒಬ್ಬ ವಿದ್ಯಾರ್ಥಿಯನ್ನು ಶಿಕ್ಷಕನಾಗಿ ಸೃಷ್ಟಿಸಲು ಶಿಕ್ಷಕರ ಕೈಯಿಂದ ಮಾತ್ರ ಸಾಧ್ಯ. ವೈದ್ಯರು, ಇಂಜಿನಿಯರ್‌ಗಳನ್ನು ಸಾಕಷ್ಟು ನೋಡುತ್ತೇವೆ. ಆದರೆ, ಇವರಿಂದ ಉತ್ತಮ ವಿದ್ಯಾರ್ಥಿ, ಪ್ರಜೆಯನ್ನು ರೂಪಿಸಲು ಆಗಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಗುರುಗಳು ಸಿಗುವುದು ವಿರಳವಾಗಲಿದೆ ಎಂದರು.
ಕಾಲೇಜಿನ ಹಳೆಯ, ಪ್ರಸ್ತುತ ವಿದ್ಯಾರ್ಥಿಗಳು ಶಿಕ್ಷಕರು, ಸಿಬ್ಬಂದಿಯನ್ನು ಸನ್ಮಾನಿಸಿದರು. ಮೈಸೂರಿನ ಬಿಷಪ್ ಆಂಟೋನಿ ಕೆ.ವಿಲಿಯಂ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಜಿ.ಜಗದೀಶ್, ಮುಕ್ತ ವಿವಿ ಹಂಗಾಮಿ ಕುಲಪತಿ ಡಾ.ಖಾದರ್ ಪಾಷ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್, ಮೈವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಸಿಡಿಸಿ ನಿರ್ದೇಶಕ ಪ್ರೊ.ಎನ್.ಕೆ.ಲೋಕನಾಥ್, ಪ್ರಾಂಶುಪಾಲೆ ಡಾ.ಪ್ರಿಯಾ ಮ್ಯಾಥಿವ್ ಇನ್ನಿತರರು ಇದ್ದರು.