

ಚಿತ್ರದುರ್ಗ: ಶಿಕ್ಷಕರು ಕ್ರಿಯಾಶೀಲತೆಯಿಂದ ಬೋಧಿಸಿದಾಗ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಡಯಟ್ ಉಪನ್ಯಾಸಕ ಎಸ್.ಬಸವರಾಜು ಹೇಳಿದರು.
ಸಮುದಾಯದತ್ತ ಶಾಲೆ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಚಿತ್ರದುರ್ಗ ತಾಲೂಕು ಹಲಗಪ್ಪನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕಾ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ಪ್ರಾಥಮಿಕ ಹಂತದಲ್ಲಿ ಸ್ಪಷ್ಟ ಓದು, ಶುದ್ಧ ಬರಹ, ಸಂಖ್ಯಾಜ್ಞಾನದಲ್ಲಿ ಸಾಮರ್ಥ್ಯ ಬೆಳೆಸಿದಾಗ ಉನ್ನತ ಹಂತದ ಶಿಕ್ಷಣ ಪಡೆಯಲು ಸುಲಭವಾಗುತ್ತದೆ. ಭಾಷಾ ಕೌಶಲ ಅಭಿವೃದ್ಧಿಪಡಿಸಲು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು ಎಂದರು.
ಶಿಕ್ಷಣ ಸಂಯೋಜಕ ಕೆ.ಆರ್.ಲೋಕೇಶ್ ಮಾತನಾಡಿ, ಮಕ್ಕಳಿಗೆ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಸಲು ಕಲಿಕಾ ಸಾಮಗ್ರಿಗಳ ಬಳಕೆ ಮಾಡಿಕೊಂಡು ಪ್ರಯೋಗಾಧಾರಿತ ಚಟುವಟಿಕೆ ಮೂಲಕ ಬೋಧಿಸಬೇಕು ಎಂದರು. ಶಿಕ್ಷಣ ಸಂಯೋಜಕ ಆಂಜನಪ್ಪ, ಮುಖ್ಯಶಿಕ್ಷಕ ಸುರೇಶ್, ಶಿಕ್ಷಕಿ ಪ್ರಶಾಂತಿ ಇತರರಿದ್ದರು.