ಕ್ರಿಯಾಶೀಲ ಜೀವನಶೈಲಿಯಿಂದ ಉತ್ತಮ ಆರೋಗ್ಯ

Health
Published on

ಚಿತ್ರದುರ್ಗ: ಪಾರ್ಶ್ವವಾಯುವಿನಿಂದ ರಕ್ಷಿಸಿಕೊಳ್ಳಲು ಸೋಮಾರಿತನದ ಬದಲು ಕ್ರಿಯಾಶೀಲ ಜೀವನಶೈಲಿ ಅಳವಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಎ.ರವೀಂದ್ರ ಸಲಹೆ ನೀಡಿದರು.

ಮದರ್ ತೆರೇಸಾ ಸ್ಕೂಲ್ ಆಫ್ ನರ್ಸಿಂಗ್ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾಸ್ಪತ್ರೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಸಹಯೋಗದೊಂದಿಗೆ ವಿಶ್ವ ಸ್ಟ್ರೋಕ್ ದಿನ, ಮಾನಸಿಕ ಆರೋಗ್ಯದ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಪಾರ್ಶ್ವವಾಯುಗೆ ಒಳಗಾದವರನ್ನು ಐದು ಗಂಟೆಯೊಳಗೆ ಜಿಲ್ಲಾಸ್ಪತ್ರೆಯ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗಕ್ಕೆ ಕರೆತಂದರೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಈ ಸಮಯವನ್ನು ಗೋಲ್ಡನ್ ಅವರ್ಸ್‌ ಎಂದು ಕರೆಯಲಾಗುತ್ತದೆ ಎಂದರು.

ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನರರೋಗ ತಜ್ಞ ಡಾ.ಕಿರಣ್‌ಗೌಡ ಮಾತನಾಡಿ, ಅನಾರೋಗ್ಯಕರ ಆಹಾರ ಪದ್ಧತಿ, ಮದ್ಯ, ಧೂಮಪಾನ, ಬೊಜ್ಜು ಪಾರ್ಶ್ವವಾಯುಗೆ ಮುಖ್ಯ ಕಾರಣಗಳಾಗಿವೆ. ಆರಂಭಿಕ ಲಕ್ಷಣ ಗುರುತಿಸಿ, ಆಸ್ಪತ್ರೆಗೆ ತ್ವರಿತವಾಗಿ ಕರೆತನ್ನಿ. ಇದರಿಂದ ಚಿಕಿತ್ಸೆ ನೀಡಿ ಮುಂದೆ ಉಂಟಾಗುವಂತಹ ಅನಾಹುತ ತಪ್ಪಿಸಬಹುದು ಎಂದರು.

ಜಿಲ್ಲಾ ಮಾನಸಿಕ ರೋಗಗಳ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಒ.ನಾಗರಾಜ್, ಕಾಲೇಜಿನ ಪ್ರಾಚಾರ್ಯೆ ಮಂಜುಳಾ, ಪಿಡಿಒ ಸುಷ್ಮ್ಮಾರಾಣಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಬಿ.ಜಾನಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net