

ಲಕ್ಷ್ಮೇಶ್ವರ: ಯಾವುದೇ ರಂಗದಲ್ಲಿ ಕೆಲಸ ಮಾಡುವ ಮೊದಲು ತರಬೇತಿ ಪಡೆದರೆ ಆ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ, ಕ್ರಿಯಾಶೀಲತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಡಯಟ್ ಪ್ರಾಚಾರ್ಯ ಜಿ.ಎಲ್. ಬಾರಾಟಕ್ಕೆ ಹೇಳಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಶಿರಹಟ್ಟಿ ಸಹಯೋಗದಲ್ಲಿ ಪಟ್ಟಣದ ಕೆ.ಜಿ.ಮುದಗಲ್ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ 2 ದಿನಗಳ ಸ್ವಯಂ ಸೇವಕ ಬೋಧಕರ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕೆಯ ನಿರೀಕ್ಷಿತ ಫಲಿತಾಂಶ ಸಾಧ್ಯವಾಗಲು ಉತ್ತಮ ತರಬೇತಿ ಮುಖ್ಯ. ತರಬೇತುದಾರರು ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ಸೂಕ್ತವಾದ ಕಲಿಕಾ ವಾತಾವರಣ ಮುಖ್ಯ.
ಅದಕ್ಕಾಗಿ ತರಬೇತಿಯಲ್ಲಿ ನೀಡುವ ಎಲ್ಲ ವಿಷಯಗಳ ಮೇಲೆ ಶಿಬಿರಾರ್ಥಿಗಳು ಗಮನವಿಟ್ಟು ಆಲಿಸಿ ಅಲ್ಲಿ ನೀಡುವ ಪ್ರತಿಯೊಂದು ಮಾಹಿತಿಯನ್ನು ಸಂಪೂರ್ಣವಾಗಿ ಗ್ರಹಿಸಿ ಭವಿಷ್ಯದಲ್ಲಿ ಉಪಯೋಗಿಸಿಕೊಂಡು ಉತ್ತಮ ಬೋಧಕರಾಗಿ ಕಾರ್ಯನಿರ್ವಹಿಸಿ ಎಂದರು.
ಸೂರಣಗಿ, ಬಾಲೇಹೊಸೂರ, ಶಿಗ್ಲಿ ಕ್ಲಸ್ಟರ್‌ನಿಂದ 88 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕೆ.ಜಿ. ಮುದಗಲ್ಲ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಲ್.ಎಸ್. ಅರಳಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಜಿ.ಎಂ. ಮುಂದಿನಮನಿ, ಡಯಟ್ ಹಿರಿಯ ಉಪನ್ಯಾಸಕ ಕೆ.ವಿ. ಪಾಟೀಲ, ಶಿಗ್ಲಿ ಕ್ಲಸ್ಟರ್‌ನ ಜ್ಯೋತಿ ಗಾಯಕವಾಡ, ಎಲ್.ಪಿ. ಮಠದ, ಜಿ.ಆರ್. ಪಾಟೀಲ, ಎ.ವಿ. ತಿಮ್ಮಾಪೂರ ಇತರರಿದ್ದರು.