ಕ್ರಿಯಾ ಯೋಜನೆಗೆ 31ರ ಗಡುವು, ವರದಿ ನೀಡುವಂತೆ ಸಂಸದ ಬಚ್ಚೇಗೌಡ ಸೂಚನೆ, ಸಂಸದರ ಆದರ್ಶ ಗ್ರಾಮಕ್ಕೆ ಗಣಗಲೂರು ಪಂಚಾಯಿತಿ ಆಯ್ಕೆ

19.08 (3)
Published on

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕಿನ ಗಣಗಲೂರು ಗ್ರಾಮ ಪಂಚಾಯಿತಿಯನ್ನು ಸಂಸದರ ಆದರ್ಶ ಗ್ರಾಮವನ್ನಾಗಿಸಲು ಎಲ್ಲ ಇಲಾಖೆಗಳು ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿ, ಆ.31ರೊಳಗೆ ಸಲ್ಲಿಸಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ಸೂಚಿಸಿದರು.

ದೇವನಹಳ್ಳಿ ತಾಲೂಕು ಜಿಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಸದ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿರುವ ಹೊಸಕೋಟೆ ತಾಲೂಕು ಗಣಗಲೂರು ಗ್ರಾಪಂ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸುವ ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಸಂಸದ ಆದರ್ಶ ಗ್ರಾಮವನ್ನು ಯಶಸ್ವಿಯಾಗಿ ಅಭಿವೃದ್ಧಿಗೊಳಿಸಲು ಎಲ್ಲ ಇಲಾಖೆಗಳ ಸಹಕಾರ ಅಗತ್ಯ. ಇಲಾಖಾ ಯೋಜನೆಗಳನ್ನು ಗ್ರಾಮದಲ್ಲಿ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವ ಮೂಲಕ ವರ್ಷದಲ್ಲಿ ಗ್ರಾಮದ ಸಂಪೂರ್ಣ ಚಿತ್ರಣ ಬದಲಾಗಲು ಹಾಗೂ ಆಧುನಿಕ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಸಮಸ್ಯೆಗಳ ಪರಿಹಾರಕ್ಕೆ ಕ್ರಮ: ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ, ರಸ್ತೆ ದುರಸ್ತಿ, ನೈರ್ಮಲ್ಯದ ಕೊರತೆ, ಅನಾರೋಗ್ಯದ ಸಮಸ್ಯೆ, ವೈದ್ಯಕೀಯ ಸೌಲಭ್ಯದ ಕೊರತೆ, ಸಾರಿಗೆ ಸಂಪರ್ಕದ ಸಮಸ್ಯೆ ಹೀಗೆ ಹಲವು ಮೂಲ ಸೌಕರ್ಯ ಕಲ್ಪಿಸಿ ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದು ಸಂಸದರು ಹೇಳಿದರು.

ಯೋಜನೆಗಳ ಮಾಹಿತಿ ತನ್ನಿ: ಪ್ರತಿಯೊಂದು ಇಲಾಖೆಯು ಗಣಗಲೂರು ಗ್ರಾಪಂನಲ್ಲಿ ಒಂದೊಂದು ಯೋಜನೆಯನ್ನು ತಂದು, ಅನುಷ್ಠಾನಗೊಳಿಸುವ ಮೂಲಕ ಸಂಸದರ ಆದರ್ಶ ಗ್ರಾಮ ಪರಿಕಲ್ಪನೆ ಸಕಾರಗೊಳಿಸಬೇಕಿದೆ, ಮುಂದಿನ ಬಾರಿ ಸಭೆಗೆ ಹಾಜರಾಗುವ ವೇಳೆ, ಇಲಾಖೆವಾರು ಕೈಗೊಂಡಿರುವ ಯೋಜನೆಗಳ ಕುರಿತ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು.

ಆದರ್ಶ ಗ್ರಾಮದಡಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ವರ್ಷದೊಳಗೆ ಸೌಕರ್ಯ ಹೊಂದಬೇಕು. ಆಶ್ರಯ ಮನೆ ಯೋಜನೆಯಡಿ ಬಾಕಿ ಇರುವ 17 ಮನೆಗೆ ನೀರಿನ ವ್ಯವಸ್ಥೆ, 25 ಮನೆಗೆ ಶೌಚಗೃಹ ನಿರ್ಮಾಣವಾಗಬೇಕು, ಪಿಂಚಣಿ ಸೌಲಭ್ಯ, ಗುರುತಿನ ಚೀಟಿ, ಪೌತಿ ಖಾತೆ ಮಾಡಿಸಿಕೊಡಬೇಕು ಹಾಗೂ ಕಾರ್ಮಿಕರು ಕೆಲಸದ ಸಮಯದಲ್ಲಿ ಗಾಯಗೊಂಡರೆ 2 ಲಕ್ಷ ರೂ, ಮೃತಪಟ್ಟರೆ 5 ಲಕ್ಷ ರೂ.ಪರಿಹಾರ ನೀಡುವ ಮೂಲಕ ಕಾರ್ಮಿಕರ ಹಿತರಕ್ಷಣೆ ಕಾಪಾಡಬೇಕೆಂದು ತಿಳಿಸಿದರು.

ಪ್ರತಿ ಇಲಾಖೆ ಜವಾಬ್ದಾರಿ: ಶುದ್ಧ ಕುಡಿಯುವ ನೀರು ಒದಗಿಸುವುದು ಇಲಾಖೆಯ ಜವಾಬ್ದಾರಿಯಾಗಿದ್ದು, ಇದರೊಂದಿಗೆ ಚರಂಡಿ, ಶೌಚಗೃಹ ನಿರ್ಮಾಣಕ್ಕೆ ಒತ್ತು ನೀಡಬೇಕು ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ತಪಾಸಣೆ ನಡೆಸಿ, ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ, ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಬೇಕು ಎಂದು ಜಿಪಂ ಸಿಇಒ ಎಂ.ಆರ್.ರವಿಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net