

ವಿಜಯವಾಣಿ ಸುದ್ದಿಜಾಲ ಧಾರವಾಡ
ತಿದ್ದುಪಡಿಗೊಳಿಸಿದ 4 ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವುದು, ಸರ್ಕಾರಿ ಉದ್ಯಮಗಳ ಮಾರಾಟ ಮತ್ತು ಖಾಸಗೀಕರಣ ನಿಲ್ಲಿಸಬೇಕು ಹಾಗೂ ಗುತ್ತಿಗೆ ಪದ್ಧತಿಯನ್ನು ನಿಷೇಧಿಸಿ ಕಾಯಂಗೊಳಿಸಲು ಆಗ್ರಹಿಸಿ ಟಾಟಾ ಮಾರ್ಕೊಪೋಲೊ ಕ್ರಾಂತಿಕಾರಿ ಸಂಘದ ಕಾರ್ಮಿಕರು ಟ್ರೇಡ್ ಯುನಿಯನ್ ಸೆಂಟರ್ ಆ್ ಇಂಡಿಯಾ ಸಂಘಟನೆಯೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಸಂಸತ್ತಿನಲ್ಲಿ ಚರ್ಚಿಸದೆ ವೇತನ, ಕೈಗಾರಿಕೆ, ಸಾಮಾಜಿಕ ಭದ್ರತೆ ಹಾಗೂ ಔದ್ಯೋಗಿಕ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಗಳನ್ನು ಅಂಗೀಕರಿಸಲಾಗಿದೆ. ಕಾರ್ಮಿಕರು ಸುಮ್ಮನೆ ಕುಳಿತರೆ ಈ ಕಾರ್ಪೋರೇಟ್ ಕಾನೂನುಗಳು ಶೀಘ್ರದಲ್ಲೇ ಜಾರಿಯಾಗಿ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲಿವೆ. ಅಲ್ಲದೆ, ಪ್ರಶ್ನಿಸುವ ಹಾಗೂ ಮುಷ್ಕರ ಹಕ್ಕು ಕಸಿದುಕೊಳ್ಳಲಿವೆ. ಆದ್ದರಿಂದ 4 ಕಾರ್ಮಿಕ ಸಂಹಿತೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಕುರಿತು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು.
ಇದೇವೇಳೆ ಟಾಟಾ ಮಾರ್ಕೊಪೋಲೊ ಕಂಪನಿಯ 400 ಕಾರ್ಮಿಕರನ್ನು ಕಾನೂನುಬಾಹಿರವಾಗಿ ಲಕ್ನೋಗೆ ವರ್ಗಾವಣೆ ಮಾಡಿರುವುದನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಕೆ.ಬಿ. ಗೋನಾಳ, ಶಿವಯೋಗಿ ಹಾಲಭಾವಿ, ಮಲ್ಲಿಕಾರ್ಜುನ ಮರತಮ್ಮನವರ, ಅಡಿವೆಪ್ಪ ಹೆಗ್ಗೇರಿ, ಮಹಾಂತೇಶ ನವಣಿ, ಸಂಭಾಜಿ ತಡಸ, ಗುಂಡಪ್ಪ ಪಿಡ್ಡನವರ, ರಾಜಶೇಖರ ಜಿ., ಸುರೇಶ ಛಪ್ಪರ, ಇತರರಿದ್ದರು.