

ಮೈಸೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಇನ್ನಷ್ಟು ವರ್ಷಗಳ ಕಾಲ ಬದುಕಿದ್ದರೆ ಪ್ರಧಾನಿ ಆಗುವ ಸಾಧ್ಯತೆ ಇತ್ತು ಎಂದು ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್.ಜಯರಾಮರಾಜೇ ಅರಸ್ ಹೇಳಿದರು.
ಕರ್ನಾಟಕ ಅರಸು ಮಹಾಮಂಡಳಿ ಚಾರಿಟಬಲ್ ಟ್ರಸ್ಟ್ , ಕೆಯುಎಂಸಿ ಟ್ರಸ್ಟ್ ಸಹಯೋಗದಲ್ಲಿ ನಗರದ ತ್ಯಾಗರಾಜ ರಸ್ತೆಯ ಬಳಿಯ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕೃತಿ ಬಿಡುಗಡೆ ‘ಚಿಂತನ ಮತ್ತು ಮಂಥನ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದುಳಿದ ವರ್ಗದವರೂ ಮುಖ್ಯಮಂತ್ರಿ ಆಗಲು ಸಾಧ್ಯವಿದೆ ಎಂಬುದನ್ನು ಅರಸು ಅವರು ಮೊದಲ ಬಾರಿಗೆ ಸಾಧಿಸಿ ತೋರಿಸಿಕೊಟ್ಟರು. ಅವರಿಗೆ ಪ್ರಧಾನಿ ಆಗುವ ಅವಕಾಶವೂ ಇತ್ತು. ಸಿಎಂ ಸ್ಥಾನ ದೊರೆಯುವುದು ಸಾಮಾನ್ಯ ಸಂಗತಿಯಲ್ಲ.
ಈ ಹಿನ್ನೆಲೆಯಲ್ಲಿ ಅರಸು ಪಟ್ಟಿರುವ ಶ್ರಮ, ಪ್ರತಿಭೆ, ಬದ್ಧತೆ, ದಕ್ಷತೆ, ನ್ಯಾಯಪರ ನಿಲುವು, ಸಾಮಾಜಿಕ ಕಳಕಳಿ ಎಷ್ಟಿತ್ತು ಎಂಬುದನ್ನು ಈಗಿನವರು ಅರ್ಥಮಾಡಿಕೊಳ್ಳಬೇಕು. ಭೂ ಸುಧಾರಣೆ ಕಾಯ್ದೆ, ಹಾವನೂರು ಆಯೋಗದ ಜಾರಿ, ಮಲ ಹೊರುವ ಪದ್ಧತಿ ನಿಷೇಧ ಮುಂತಾದ ಕ್ರಾಂತಿಕಾರಕ ಸುಧಾರಣೆ ಅನುಷ್ಠಾನಗೊಳಿಸಿದ ಕಾರಣದಿಂದ ಜನರ ಹೃದಯದಲ್ಲಿ ಅಜರಾಮರವಾಗಿ ಉಳಿದುಕೊಂಡಿದ್ದಾರೆ ಎಂದರು.
ಎಲ್ಲರು ತಮ್ಮ ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಸಾಕಷ್ಟು ಹಾಸ್ಟೆಲ್ ಸ್ಥಾಪಿಸಿದ್ದಾರೆ. ಆದರೆ, ಅರಸು ಸಮುದಾಯ ತಮ್ಮ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿನಿಲಯಗಳ ಸ್ಥಾಪನೆಗೆ ಮುಂದಾಗದಿರುವುದು ಬೇಸರದ ಸಂಗತಿ ಎಂದರು.
ಬಿ.ಎಸ್.ಶ್ರೀಧರರಾಜೇ ಅರಸ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಡಾ.ಎಂ.ಆರ್. ಭಾರತೀ, ಲಕ್ಷ್ಮೀಕಾಂತರಾಜೇ ಅರಸ್ ಅವರು ಸಂಪಾದಿಸಿರುವ ‘ಯಶೋಗಾಥೆ ಅರಸು ಜನಾಂಗದ ಸಾಧಕರು’ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಚಿತ್ರ ಸಂಕಲನಕಾರ ಬಿ.ಸುರೇಶ್ ಅರಸ್, ಎಂ.ಕೆ.ಆನಂದರಾಜೇ ಅರಸ್, ಕೃತಿಯ ಸಂಪಾದಕರಾದ ಬಿ.ಎಸ್.ಶ್ರೀಧರರಾಜೇ ಅರಸ್, ಡಾ.ಎಂ.ಆರ್.ಭಾರತೀ, ಲೇಖಕ ಲಕ್ಷ್ಮೀಕಾಂತರಾಜೇ ಅರಸ್ ಹಾಗೂ ಎಂ.ಎಲ್.ಬಸವರಾಜೇ ಅರಸ್, ಡಾ.ರಾಮರಾಜೇ ಅರಸ್, ಸುಶೀಲಾ ಅರಸ್ ಇನ್ನಿತರರಿದ್ದರು.