

ಚಾಮರಾಜನಗರ: ನವೆಂಬರ್ ಕ್ರಾಂತಿ ನಡೆಯಲು ಸಿಎಂ ಕುರ್ಚಿ ಖಾಲಿ ಇಲ್ಲವಲ್ಲ. ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಯಾಕೆ ಇರಬಾರದು ಎಂದು ರೇಷ್ಮೆ, ಪಶು ಸಂಗೋಪನಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಪ್ರಶ್ನಿಸಿದರು.
ನಗರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಬೇಕೆನ್ನುವುದು ನಮ್ಮೆಲ್ಲರ ಅಭಿಲಾಷೆ. ಹೈಕಮಾಂಡ್ ಮಾಡುವ ತೀರ್ಮಾನಕ್ಕೆ ಸಿಎಂ ಹಾದಿಯಾಗಿ ನಾವೆಲ್ಲರೂ ಬದ್ಧರು. ಸಚಿವ ಸಂಪುಟ ಬದಲಾವಣೆಯಾಗುತ್ತದೆಯೋ ಅಥವಾ ಪುನರ್ ರಚನೆಯಾಗುತ್ತದೆಯೋ ಹೈಕಮಾಂಡ್ ನಿರ್ಧರಿಸಲಿದೆ ಎಂದರು.
ನವೆಂಬರ್-ಡಿಸೆಂಬರ್‌ನೊಳಗೆ ರಾಜ್ಯದಲ್ಲಿ ಕ್ರಾಂತಿಯಾಗುವುದು ನಿಶ್ಚಿತವೆಂಬ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಏನು ಮಾತನಾಡುತ್ತಿದ್ದೇವೆ ಎನ್ನುವುದು ಅವರಿಗೇ ಗೊತ್ತಾಗುತ್ತಿಲ್ಲ. ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯವರು ಮೆರವಣಿಗೆ ಮಾಡಿದ್ದೇ ಮಾಡಿದ್ದು. ಕಾಂಗ್ರೆಸ್‌ನ ಬೈದಿದ್ದೇ ಬೈದಿದ್ದು. ಕೊನೆಗೆ ವೀರೇಂದ್ರ ಹೆಗಡೆಯವರು ಸರ್ಕಾರದಿಂದ ನಮಗೆ ಉಪಯೋಗವಾಗಿದೆ. ಅವರು ಎಸ್‌ಐಟಿ ರಚಿಸಿ ತನಿಖೆ ಮಾಡಿಸಿದ್ದರಿಂದ ಒಳ್ಳೆಯದೇ ಆಗಿದೆ. ನಮ್ಮ ಕಳಂಕ ತೀರಿತು ಎಂದು ಹೇಳಿದರು. ಬಿಜೆಪಿಯವರಿಗೆ ಇದು ಸಾಕಾ ಎಂದು ಪ್ರಶ್ನಿಸಿದರು.
ಜಾತಿ ಸಮೀಕ್ಷೆಯಲ್ಲಿ ಕೇಳುವ ವೈಯಕ್ತಿ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿ, ಸಮೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದಕ್ಕೆ ಎಷ್ಟು ಹೇಳಬೇಕೋ ಅಷ್ಟು ಹೇಳಿದರೆ ಮುಗಿಯಿತು. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕೆಂದೇನೂ ಇಲ್ಲ ಎಂದರು.
ಕೇಂದ್ರ ಸರ್ಕಾರ ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಯೋಜನೆ ಮಾಡಬೇಕೆಂದು ಹೇಳಿದೆ. ಆದರೆ ಇದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಕೊಟ್ಟಿಲ್ಲ. ಸುದೀರ್ಘವಾಗಿ ಚರ್ಚೆ ಮಾಡಬೇಕಾದ ವಿಚಾರವಿದು.ಈ ಬಗ್ಗೆ ಇನ್ನೂ ತಿರ್ಮಾನ ತೆಗೆದುಕೊಂಡಿಲ್ಲ. ಆಕ್ಸಿಜನ್ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ. ಸಂತ್ರಸ್ತರಿಗೆ ಎಲ್ಲೆಲ್ಲಿ ಕೆಲಸ ಕೊಡಬೇಕೆಂಬ ಜವಾಬ್ದಾರಿಯನ್ನು ಡಿಸಿಗೆ ನೀಡಲಾಗಿದೆ ಎಂದು ಹೇಳಿದರು.
ಜನರು ಹುಲಿಗಳನ್ನು ಯಾಕೆ ಹೀಗೆ ಕೊಲೆ ಮಾಡುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಪಚ್ಚೆದೊಡ್ಡಿಯಲ್ಲಿ ಹುಲಿ ಕೊಂದ ಪ್ರಕರಣದಲ್ಲಿ ಬೇಟೆಗಾರಿಕೆಯ ಉದ್ದೇಶವಿಲ್ಲದಿದ್ದರೂ ಹತ್ಯೆ ಮಾಡಲಾಗಿದೆ. ಕಾಡಿನಲ್ಲಿ ದನ ಮೇಯುವಾಗ ಹುಲಿ ದಾಳಿ ಮಾಡಿದರೆ ವಿಷ ಹಾಕುತ್ತಾರೆ. ದನಗಳನ್ನು ಕಾಡಿನೊಳಗೆ ಬಿಡುವ ಬದಲು ಕಾಡಂಚಿನಲ್ಲಿ ಮೇಯಿಸಲಿ ಎಂದರು ಹೇಳಿದರು.