ಕ್ರಷರ್​ಗಳ ಸ್ಥಗಿತಕ್ಕೂ ನೋಟಿಸ್ ಸಾಧ್ಯತೆ

KAPPATAGUDDA...
Published on

ಗದಗ: ಕಪ್ಪತ್ತಗುಡ್ಡ ವನ್ಯಜೀವಿಧಾಮ ವ್ಯಾಪ್ತಿಯ (ಗಡಿಯಿಂದ) ಒಂದು ಕಿಲೋ ಮೀಟರ್ ಒಳಗಿರುವ ಕ್ರಷರ್​ಗಳನ್ನು ಬಂದ್ ಮಾಡಲು ಶೀಘ್ರದಲ್ಲಿ ನೋಟಿಸ್ ಜಾರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಎಷ್ಟು ಕ್ರಷರ್​ಗಳಿಗೆ ನೋಟಿಸ್ ನೀಡಬೇಕೆಂಬ ವಿಷಯ ಚರ್ಚೆ ಹಂತದಲ್ಲಿದ್ದು, ಇಷ್ಟರಲ್ಲಿಯೇ ಅಂತಿಮ ನಿರ್ಣಯ ಹೊರಬೀಳಬಹುದು.

ಗದಗ, ಮುಂಡರಗಿ, ಶಿರಹಟ್ಟಿ ತಾಲೂಕು ವ್ಯಾಪ್ತಿಯ ಕಲ್ಲಿನ ಕ್ವಾರಿ, ಮರಳು ಬ್ಲಾಕ್​ಗಳ ಗುತ್ತಿಗೆದಾರರಿಗೆ ನೋಟಿಸ್ ಘಟಕಗಳನ್ನು ಬಂದ್ ಮಾಡುವಂತೆ ಗಣಿ ಇಲಾಖೆ ಸೂಚನೆ ನೀಡಿದೆ. ಅದೇ ಮಾನದಂಡದಡಿ ಒಂದು ಕಿಮೀ ವ್ಯಾಪ್ತಿಯೊಳಗಿನ ಕ್ರಷರ್​ಗಳನ್ನು ಬಂದ್ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

14 ಘಟಕಗಳು ಬಂದ್: ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಸೂಚನೆಯಂತೆ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯು ಕಲ್ಲಿನ ಕ್ವಾರಿ, ಮರಳು ಬ್ಲಾಕ್ ಮೊದಲಾದ ಘಟಕಗಳನ್ನು ಬಂದ್ ಮಾಡಲು ಆದೇಶ ಹೊರಡಿಸಿದೆ. ಸದ್ಯ ಎಲ್ಲ 14 ಘಟಕಗಳ ಕಾರ್ಯನಿರ್ವಹಣೆ ಬಂದ್ ಆಗಿದೆ.

ಪ್ರಭಾವಿಗಳು ಮಾಲೀಕತ್ವ ಹೊಂದಿರುವ ಕಲ್ಲಿನ ಕ್ವಾರಿ, ಕ್ರಷರ್​ಗಳನ್ನು ಸುಲಭವಾಗಿ ಬಂದ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಒಂದೆಡೆಯಾದರೆ, ಪರಿಸರಕ್ಕೆ ಸಾಕಷ್ಟು ಹಾನಿ ಉಂಟು ಮಾಡುವಂತಹ ಕ್ರಷರ್​ಗಳನ್ನು ಕೈಬಿಟ್ಟು ಕ್ವಾರಿಗಳ ಮೇಲೆ ಅಧಿಕಾರ ಚಲಾಯಿಸುವುದು ಸರಿಯಲ್ಲ. ಇದು ಬರೀ ಕಣ್ಣೊರೆಸುವ ತಂತ್ರವಾಗಬಾರದು. ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಮಾಲೀಕರ ಮನವಿ ಕುರಿತು ಚರ್ಚೆ: ನೋಟಿಸ್ ಪಡೆದ ಕ್ವಾರಿಗಳ ಮಾಲೀಕರು ಮೂರು ತಿಂಗಳು ಕಾಲಾವಕಾಶ ಕೇಳಿದ್ದಾರೆ. ಕ್ವಾರಿಗಳ ಮಾಲೀಕರ ಮನವಿಯನ್ನು ಜಿಲ್ಲಾ ಮಟ್ಟದ ಟಾಸ್ಕ್​ಫೋರ್ಸ್ ಸಮಿತಿಯಲ್ಲಿಟ್ಟು ಮತ್ತೊಮ್ಮೆ ರ್ಚಚಿಸಲಾಗುವುದು ಎಂದು ಗಣಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಕಲ್ಲಿನ ಕ್ವಾರಿಯವರ ಪೈಕಿ ಅನೇಕರು ಈಗಾಗಲೇ ಪ್ರಭಾವಿಗಳ ಸಂಪರ್ಕದಲ್ಲಿದ್ದಾರೆ. ಕ್ವಾರಿಗಳನ್ನು ಬಂದ್ ಮಾಡಬಾರದೆಂದು ಒತ್ತಾಯಿಸಿ ತೀವ್ರ ಲಾಬಿ ಆರಂಭಿಸಿದ್ದಾರೆ. ಕೆಲ ಕ್ರಷರ್​ಗಳ ಮಾಲೀಕರೂ ಕ್ವಾರಿಗಳ ಮಾಲೀಕರಿಗೆ ಸಾಥ್ ನೀಡಿದ್ದಾರೆ. ಅಲ್ಲದೆ, ಜನಪ್ರತಿನಿಧಿಗಳು ಕ್ವಾರಿಗಳ ಮಾಲೀಕರ ರಕ್ಷಣೆ ನಿಂತಿದ್ದಾರೆ ಎಂಬ ಮಾತಿದೆ. ಹೀಗಾಗಿ, ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಪ್ರಭಾವಿಗಳು ತಮ್ಮ ಪ್ರಭಾವವನ್ನು ಬಳಸುವ ಸಾಧ್ಯತೆಗಳಿವೆ.

ಆದೇಶ ರದ್ದತಿಗೆ ಪ್ರಯತ್ನ

ಕಾಂಗ್ರೆಸ್-ಜೆಡಿಎಸ್ ಸರ್ಕಾರವು 2019ರ ಮೇ 6ರಂದು ಕಪ್ಪತಗುಡ್ಡವನ್ನು ವನ್ಯಜೀವಿಧಾಮ ಎಂದು ಘೊಷಿಸಿದೆ. ವರ್ಷದ ನಂತರ ಅಳೆದು ತೂಗಿ ವರದಿ ಸಿದ್ಧಪಡಿಸಲಾಗಿದೆ. ಅದರನ್ವಯ ಈಗ ವನ್ಯಜೀವಧಾಮ ಮಿತಿಯೊಳಗಿರುವ ಕ್ವಾರಿಗಳಿಗೆ ನೋಟಿಸ್ ನೀಡಲಾಗಿದೆ. ಆದರೆ, ಕಪ್ಪತಗುಡ್ಡ ವನ್ಯಜೀವಿಧಾಮ ಆಗುವುದು ಬೇಡ, ಸಂರಕ್ಷಿತರ ಅರಣ್ಯ ಪ್ರದೇಶ ಎಂಬ ಯೋಜನೆಯೂ ಬೇಡ ಎಂದು ವಾದಿಸುತ್ತಿರುವ ಗಣಿ ಕುಳಗಳ ಜತೆಗೆ ಕೆಲವು ರಾಜಕೀಯ ಮುಖಂಡರು ಕೈಜೋಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಪ್ಪತಗುಡ್ಡದ ಸೆರಗಿನಲ್ಲಿ ಕಲ್ಲಿನ ಕ್ವಾರಿ ನಡೆಸುತ್ತಿರುವ ಕೆಲವು ಹಾಲಿ, ಮಾಜಿ ಶಾಸಕರು ಸಹ ಕಪ್ಪತಗುಡ್ಡ ವನ್ಯಜೀವಿಧಾಮ ಆದೇಶ ರದ್ದುಪಡಿಸಬೇಕೆಂದು ಪರೋಕ್ಷವಾಗಿ ಪ್ರಯತ್ನ ನಡೆಸಿದ್ದು, ಜನರನ್ನು ಎತ್ತಿಕಟ್ಟುವ ಕೆಲಸ ಮುಂದುವರಿಸಿದ್ದಾರೆ. ಕಪ್ಪತಗುಡ್ಡ ವನ್ಯಜೀವಿಧಾಮವನ್ನಾಗಿ ಮಾಡಿದರೆ ಸ್ಥಳೀಯರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಸರ್ಕಾರಕ್ಕೆ ಕೆಟ್ಟ ಹೆಸರು ತಂದುಕೊಳ್ಳಬಾರದು ಎಂದು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನೂ ನಡೆಸಿದ್ದಾರೆ ಎಂಬ ಆರೋಪಗಳಿವೆ.

ಜಿಲ್ಲಾ ಮಟ್ಟದ ಟಾಸ್ಕ್​ಫೋರ್ಸ್ ಸಮಿತಿಯಲ್ಲಿ ರ್ಚಚಿಸಿ ಕಲ್ಲಿನ ಕ್ವಾರಿ, ಮರಳು ಬ್ಲಾಕ್​ಗಳನ್ನು ಬಂದ್ ಮಾಡುವಂತೆ ನೋಟಿಸ್ ನೀಡಲಾಗಿದೆ. ವನ್ಯಜೀವಿಧಾಮ ಅನುಷ್ಠಾನ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವುದು ನಮ್ಮ ಕರ್ತವ್ಯ. ಕ್ವಾರಿಗಳ ಮಾಲೀಕರು ನೋಟಿಸ್ ನೀಡಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಯಾವುದೇ ಕಾರಣಕ್ಕೂ ನೋಟಿಸ್ ಹಿಂಪಡೆಯಲು ಅವಕಾಶವಿಲ್ಲ.| ಸೂರ್ಯಸೇನ ಡಿಎಫ್​ಒ, ಗದಗ

ದೊಡ್ಡ ಮಟ್ಟದಲ್ಲಿ ಲಾಬಿ ಶುರು

ವನ್ಯಜೀವಧಾಮ ವ್ಯಾಪ್ತಿಯ ಗಡಿಯಿಂದ ಒಂದು ಕಿಮೀ ಅಂತರದಲ್ಲಿರುವ ಕಲ್ಲಿನ ಕ್ವಾರಿಗಳನ್ನು ಬಂದ್ ಮಾಡಿದರೆ ಕ್ರಷರ್​ಗಳನ್ನು ನಡೆಸುವುದು ಹೇಗೆ ಎಂಬ ಚಿಂತೆ ಕ್ರಷರ್ ಮಾಲೀಕರಲ್ಲಿ ಶುರುವಾಗಿದೆ. ಕಲ್ಲು ಇದ್ದರೆ ಕ್ರಷ್ ಮಾಡಬಹುದು. ಅದೇ ಬಂದ್ ಆದರೆ ಕಲ್ಲು ಎಲ್ಲಿಂದ ತರಬೇಕು. ಸಮೀಪದಲ್ಲಿ ಕಲ್ಲು ಸಿಕ್ಕರೆ ಸಾಗಣೆಗೂ ಅನುಕೂಲವಾಗಲಿದೆ. ಹೆಚ್ಚು ಲಾಭವನ್ನೂ ಗಳಿಸಬಹುದು ಎಂಬ ಲೆಕ್ಕಾಚಾರದ ಆಧಾರದ ಮೇಲೆ ಕಲ್ಲಿನ ಕ್ವಾರಿಗಳ ಸಮೀಪ ಕ್ರಷರ್ ಘಟಕಗಳನ್ನು ಹಾಕಲಾಗಿದೆ. ಆದರೀಗ, ವನ್ಯಜೀವಿಧಾಮದ ಒಂದು ಕಿಮೀ ವ್ಯಾಪ್ತಿಯ ಕ್ವಾರಿಗಳನ್ನು ಬಂದ್ ಮಾಡಿದರೂ ವನ್ಯಜೀವಿಧಾಮ ವ್ಯಾಪ್ತಿಯಿಂದ ಹೊರಗಿರುವ ಕ್ವಾರಿಗಳಿಂದಲಾದರೂ ಕಲ್ಲು ತಂದು ಕ್ರಷ್ ಮಾಡಬಹುದು. ಕೋಟ್ಯಂತರ ರೂ. ಬಂಡವಾಳ ಹೂಡಿ ಆರಂಭಿಸಿರುವ ಕ್ರಷರ್​ಗಳನ್ನು ಬಂದ್ ಮಾಡಲು ಕ್ರಷರ್ ಮಾಲೀಕರು ತಯಾರಿಲ್ಲ. ಹೀಗಾಗಿ, ಅವರು ದೊಡ್ಡ ಮಟ್ಟದಲ್ಲಿ ಲಾಬಿ ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net