ಕ್ಯಾಷ್‌ಲೆಸ್ಗೆ ರೈಟ್, ರೈಟ್

CTD KSRTC...
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ಪ್ರಯಾಣಿಕರ ನಗದು ರಹಿತ ಟಿಕೆಟ್ ಖರೀದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅವಕಾಶ ಕಲ್ಪಿಸಿದೆ. ಯುಪಿಐ ಮೂಲಕ ಹಣ ಪಾವತಿಸಿ ಅಥವಾ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಪ್ರಯಾಣಿಕರು ಇನ್ನು ಮುಂದೆ ಟಿಕೆಟ್ ಖರೀದಿಸಬಹುದಾಗಿದೆ.

ಸೋಮವಾರದಿಂದ ನಿಗಮದ ಬೆಂಗಳೂರು ವಿಭಾಗೀಯ ನಿಯಂತ್ರಣ ಕಚೇರಿ ಹಾಗೂ ಸಂಸ್ಥೆಯ ಹಲವು ಪ್ರೀಮಿಯಂ ಲಾಂಗ್ ರೂಟ್ ಬಸ್‌ಗಳಲ್ಲಿ, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(ಯುಪಿಐ) ಮೂಲಕ ಪ್ರಯಾಣಿಕರು ಟಿಕೆಟ್ ಖರೀದಿಸುವ ಸೌಲಭ್ಯ ಕಲ್ಪಿಸಿದೆ.

ಈ ತಿಂಗಳ ಅಂತ್ಯದೊಳಗೆ ಈ ಸೌಲಭ್ಯವನ್ನು ಬಳಸಿ ರಾಜ್ಯದಲ್ಲಿರುವ ನಿಗಮದ 14 ವಿಭಾಗೀಯ ನಿಯಂತ್ರಣ ಕಚೇರಿಗಳ ವ್ಯಾಪ್ತಿಯ ಎಲ್ಲ 84 ಡಿಪೋಗಳ 8800 ಕ್ಕೂ ಹೆಚ್ಚು ಬಸ್‌ಗಳಲ್ಲಿ ಕ್ಯೂಆರ್ ಕೋಡ್ ಬಳಸಿ ಡಿಜಿಟಲ್ ಪಾವತಿ ಮೂಲಕ ಪ್ರಯಾಣಿಕರು ಟಿಕೆಟ್ ಪಡೆಯಬಹುದಾಗಿದೆ.

ಈ ವ್ಯವಸ್ಥೆ ಜಾರಿಗಾಗಿ ಕಳೆದ ಒಂದು ತಿಂಗಳಿಂದಲೂ ಚಾಲಕ-ಕಂಡಕ್ಟರ್‌ಗಳಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಒಂದು ವೇಳೆ ಜೇಬಲ್ಲಿ ಹಣವಿಲ್ಲದಿದ್ದರೂ ಪ್ರಯಾಣಿಕರು ನಿರಾತಂಕವಾಗಿ ಬಸ್ಸನೇರಿ ಆ್ಯಂಡ್ರಾಯ್ಡಾ ಫೋನ್ ಇದ್ದರೆ ಟಿಕೆಟ್ ಖರೀದಿಸಬಹುದಾಗಿದೆ.

ಡಿಜಿಟಲ್ ಪಾವತಿಗೆಂದು ನಿಗಮ ನಾನಾ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಂಡಕ್ಟರ್‌ಗಳಿಗೆ ಹೊಸದಾಗಿ 10245 ಸ್ಮಾರ್ಟ್ ಇಟಿಎಂಗಳನ್ನೂ ಒದಗಿಸಿದೆ. ಒಂದು ವೇಳೆ ಫೋನ್, ಪೇಟಿಎಂ, ಗೂಗಲ್ ಪೇ ಹೊಂದಿಲ್ಲದ ಪ್ರಯಾಣಿಕರು ಆತಂಕಕ್ಕೆ ಒಳಪಡಬೇಕಾಗಿಲ್ಲ. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಕೂಡ ಪ್ರಯಾಣಿಸಬಹುದಾಗಿದೆ.

ಕಾರ್ಡ್ ಬಳಕೆ ವ್ಯವಸ್ಥೆ ಬಹುತೇಕ ಡಿಸೆಂಬರ್ ಅಂತ್ಯದೊಳಗೆ ಜಾರಿಯಾಗುವ ನಿರೀಕ್ಷೆ ಇದೆ. ಡಿಜಿಟಲ್ ಪಾವತಿಯಿಂದಾಗಿ ಚಿಲ್ಲರೆ ಸಮಸ್ಯೆಗೆ ಇತಿಶ್ರೀ ಹಾಡಿದಂತಾಗಿದೆ. ಸದ್ಯಕ್ಕೆ ಬಾಡಿಗೆ ಆಧರಿಸಿ ಒದಗಿಸಿರುವ ಹೊಸ ಇಟಿಎಂಗಳನ್ನು ಬಳಸಿ ಅಧಿಕೃತ ಪಾಸ್‌ಗಳನ್ನು ರೀಡಿಂಗ್ ಮಾಡಬಹುದಾಗಿದ್ದು, ನಕಲಿ ಪಾಸ್‌ಗಳಿಗೆ ಕಡಿವಾಣ ಬೀಳಲಿದೆ.

---

ಟಿಕೆಟ್ ಕಡ್ಡಾಯ

ಪ್ರಯಾಣಿಕರು ಟಿಕೆಟ್ ಕಳೆದುಕೊಂಡಿದ್ದರೂ, ಟಿಕೆಟ್ ಚೆಕ್ಕಿಂಗ್ ವೇಳೆ ಡಿಜಿಟಲ್ ಪಾವತಿಯ ಸಾಕ್ಷೃ ತೋರಿಸಬಹುದೇ? ಇಲ್ಲ.ನಗದು ಅಥವಾ ನಗದುರಹಿತ ಪಾವತಿ ಮೂಲಕ ಖರೀದಿಸಿದ್ದರೂ, ಪ್ರಯಾಣದ ಅತ್ಯಂತದವರೆಗೆ ಪ್ರಯಾಣಿಕರು ಟಿಕೆಟ್ ಕಾದಿಟ್ಟು ಕೊಳ್ಳುವುದು ಕಡ್ಡಾಯವೆಂದು ನಿಗಮದ ಮೂಲಗಳು ಸ್ಪಷ್ಟಪಡಿಸಿವೆ.

---

ದುರ್ಗಕ್ಕೆ ಮುಂದಿನ ವಾರ ಭೇಟಿ

ಸದ್ಯಕ್ಕೆ ಬೆಂಗಳೂರು ಸೇರಿದಂತೆ ಆಯ್ದ ಬಸ್‌ಗಳಲ್ಲಿ ಡಿಜಿಟಲ್ ಪಾವತಿಗೆ ವ್ಯವಸ್ಥೆ ಮಾಡಿಕೊಡಲಿದೆ. ಈ ತಿಂಗಳ ಅಂತ್ಯದೊಳಗೆ ನಿಗಮದ ಎಲ್ಲ ಡಿವಿಜನ್‌ಗಳಿಗೂ ಹೊಸ ವ್ಯವಸ್ಥೆ ವಿಸ್ತರಿಸಲಾಗುವುದು. ಡಿಸೆಂಬರ್ ಅಂತ್ಯದೊಳಗೆ ಕಾರ್ಡ್ ಬಳಸಿ ಟಿಕೆಟ್ ಖರೀದಿಸಲೂ ಅವಕಾಶ ಮಾಡಿಕೊಡಲಾಗುವುದು. ಚಿತ್ರದುರ್ಗದಲ್ಲಿ ಹೈಟೆಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣ ನನೆಗುದಿಗೆ ಬಿದ್ದಿರುವ ಕುರಿತಂತೆ ಪರಿಶೀಲಿಸಲಾಗುವುದು. ಮುಂದಿನ ವಾರ ದುರ್ಗಕ್ಕೆ ಭೇಟಿ ಕೊಡಲಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net