ಕ್ಯಾಬಿನೆಟ್‌ನಲ್ಲಿ ಒಳ ಕ್ರೀಡಾಂಗಣ ಸ್ಥಾಪನೆಗೆ ಮನವಿ

24Rajesh6
Published on

ಚಾಮರಾಜನಗರ: ಕ್ರೀಡಾ ಚಟುವಟಿಕೆಗೆ ಉತ್ತೇಜನ ನೀಡಬೇಕಾಗಿರುವುದರಿಂದ ಒಳಾಂಗಣ ಕ್ರೀಡಾಂಗಣ, ಈಜುಕೊಳ ನಿರ್ಮಾಣಕ್ಕಾಗಿ ಸಚಿವ ಸಂಪುಟ ಸಭೆಯಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ನೌಕರರ ಎರಡು ದಿನಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೌಕರರು ಕೆಲಸದ ಒತ್ತಡದಲ್ಲಿ ಸಿಲುಕಿಕೊಂಡು 30-40 ವರ್ಷಕ್ಕೆ ಹೃದಯ ರೋಗ ಸಮಸ್ಯೆ ಕಾಡುತ್ತಿದೆ. ಕೌಟುಂಬಿಕ ಜವಾಬ್ದಾರಿಗಳನ್ನೂ ನಿಭಾಯಿಸಬೇಕು. ಸಮಯಕ್ಕೆ ಸರಿಯಾಗಿ ಊಟ, ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ. ಎರಡು ದಿನಗಳ ಕ್ರೀಡಾಕೂಟ ಎಲ್ಲರಲ್ಲೂ ಸಂತೋಷ ತರಲಿ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಮಾತನಾಡಿ, ಶಾಲೆ-ಕಾಲೇಜುಗಳಲ್ಲಿ ಓದಿಗೆ ಮೊದಲ ಆದ್ಯತೆ ಬಳಿಕ ಕ್ರೀಡೆ ಸ್ಥಾನ ಪಡೆದುಕೊಂಡಿದೆ. ಆಸಕ್ತರು ಮಾತ್ರ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಕ್ರೀಡೆ ಆರೋಗ್ಯಕ್ಕೆ ಮುಖ್ಯ. ಪ್ರತಿದಿನ ದೈಹಿಕ ಚಟುವಟಿಕೆ ನಡೆಸಬೇಕು. ನನ್ನ ತಂದೆ, ತಾಯಿ, ಅಣ್ಣ ಮ್ಯಾರಥಾನ್ ಓಟಗಾರರು. ಡಿಸಿ ಶಿಲ್ಪಾನಾಗ್ ಅವರೂ ಕೂಡ ಮ್ಯಾರಥಾನ್ ಓಟಗಾರರಾಗಿದ್ದರು. ಕ್ರೀಡೆಯಿಂದ ಶಿಸ್ತು, ಸಮಯ ಪಾಲನೆ, ಗುರಿ ತಲುಪುವ ಛಲ ಕಲಿಯಬಹುದು ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀ ಮಾತನಾಡಿ, ಕೆಲಸದ ಒತ್ತಡ ನಿರ್ವಹಣೆ ತುಂಬಾ ಮುಖ್ಯ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯ ವಾಟರ್‌ಮನ್‌ನಿಂದ ಹಿಡಿದು ಎಲ್ಲ ಸಿಬ್ಬಂದಿಯೂ ಬಂದು ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದಕ್ಕೆ ಜಿಪಂ ಸಿಇಒ ಮೋನಾರಾತ್ ಅವಕಾಶ ಮಾಡಿಕೊಟ್ಟಿದ್ದಾರೆ. ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕಾರ ಮಾಡೋಣ ಎಂದು ಹೇಳಿದರು.

ಕ್ರೀಡಾಕೂಟದಲ್ಲಿ ವಿವಿಧ ತಂಡಗಳು ಭಾಗವಹಿಸಿ ಪಥ ಸಂಚಲನ ನಡೆಸಿದರು. ಇದಕ್ಕೂ ಮೊದಲು ತಮಟೆ ಸದ್ದಿಗೆ ನೌಕರರು ನೃತ್ಯ ಮಾಡಿ ಸಂಭ್ರಮಿಸಿದರು. ಕ್ರೀಡಾಕೂಟಕ್ಕೆ ಆಗಮಿಸಿದ ಅಧಿಕಾರಿಗಳನ್ನು ಜಾನಪದ ಕಲಾತಂಡಗಳು ಸ್ವಾಗತಿಸಿದವು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಇಇಗಳಾದ ಆನಂದ್, ರಮೇಶ್, ಎಇಇ ಶಿವು ಮತ್ತು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net