ಕ್ಯಾನ್ಸರ್ ರೋಗಿಗಳಿಗೆ ಧೈರ್ಯ ತುಂಬಿ

4 CBP 2
Published on

ಚಿಕ್ಕಬಳ್ಳಾಪುರ:  ಕ್ಯಾನ್ಸರ್ ಗುಣವಾಗುವಂತಹ ಕಾಯಿಲೆ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಪ್ರಾಣ ಹಾನಿ ತಪ್ಪಿಸಬೇಕಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಸಲಹೆ ನೀಡಿದರು.

ತಾಲೂಕಿನ ಪೆರೇಸಂದ್ರ ಶಾಂತಾ ನರ್ಸಿಂಗ್ ಕಾಲೇಜ್ ಮತ್ತು ಶಾಂತಾ ವಿದ್ಯಾನಿಕೇತನ್ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಕ್ಯಾನ್ಸರ್ ಜಾಥಾ ಉದ್ದೇಶಿಸಿ ಮಾತನಾಡಿ, ವೈದ್ಯಕೀಯ ಕ್ಷೇತ್ರವು ನಿರಂತರ ಸಂಶೋಧನೆಗಳಿಂದ ಬೆಳವಣಿಗೆಯನ್ನು ಕಾಣುತ್ತಿದೆ. ಹೊಸದಾಗಿ ಬರುತ್ತಿರುವ ಮಾರಕ ಕಾಯಿಲೆಗೆ ಅನುಗುಣವಾಗಿ ಅತ್ಯಾಧುನಿಕ ಚಿಕಿತ್ಸೆ ಕಂಡು ಹಿಡಿಯಲಾಗುತ್ತಿದೆ. ಇದರ ಬಗ್ಗೆ ತಜ್ಞರು ಮತ್ತು ಸಂಘ ಸಂಸ್ಥೆಗಳು ಜನರಲ್ಲಿ ಅರಿವು ಮೂಡಿಸಬೇಕು. ಸಕಾಲದಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ, ಆರೋಗ್ಯಕರ ಜೀವನ ನಿರ್ವಹಣೆ ಮತ್ತು ಸರ್ಕಾರಿ ಸವಲತ್ತುಗಳನ್ನು ತಿಳಿಸುವ ಮೂಲಕ ಧೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.

ಕ್ಯಾನ್ಸರ್ ಕಾಯಿಲೆ ಗುಣವಾಗುತ್ತದೆ. ಆದರೆ, ಬಹುತೇಕ ಸಂದರ್ಭದಲ್ಲಿ ಪತ್ತೆ ಮತ್ತು ಚಿಕಿತ್ಸೆ ವಿಳಂಬದಿಂದ ಪ್ರಾಣ ಹಾನಿಯು ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಪ್ರತಿಯೊಬ್ಬರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಸಮಸ್ಯೆ ಪತ್ತೆಯಾದಲ್ಲಿ ತ್ವರಿತವಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ನವೀನ್ ಸೈಮನ್, ಉಪನ್ಯಾಸಕರಾದ ರಘು, ದೀಪಕ್ ಮ್ಯಾಥು, ಅಜೀಶ್ ಮತ್ತಿತರರು ಇದ್ದರು.

ವಿವಿಧೆಡೆ ಜಾಗೃತಿ ಜಾಥಾ : ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪ್ರಮುಖ ರಸ್ತೆಗಳಲ್ಲಿ ಭಿತ್ತಿ ಫಲಕಗಳೊಂದಿಗೆ ಜಾಥಾ ನಡೆಸಿ ಕ್ಯಾನ್ಸರ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಿದರು. ಸೂಕ್ತ ತಪಾಸಣೆ, ಚಿಕಿತ್ಸೆ ಲಭ್ಯತೆಯ ಬಗ್ಗೆ ಜನರಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net