ಕ್ಯಾನ್ಸರ್ ಕುರಿತು ಅರಿವು ಅಗತ್ಯ

Cancer
Published on

ಚಿತ್ರದುರ್ಗ: ಮಹಿಳೆಯರ ಆರೋಗ್ಯದ ಕುರಿತು ಎಲ್ಲರೂ ಕಾಳಜಿ ವಹಿಸಬೇಕು. ಅಲ್ಲದೆ, ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಅರ್ಥಪೂರ್ಣ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ಶ್ರೀಮಠದ ಅನುಭವ ಮಂಟಪದಲ್ಲಿ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಚಿತ್ರದುರ್ಗ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರ ಸಂಘದಿಂದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ, ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಕ್ಯಾನ್ಸರ್ ಜಾಗೃತಿ ಅಭಿಯಾನ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಿರುವ ನಾರಿಯರು ಶೋಷಣೆಗೆ ಒಳಗಾಗುತ್ತಿದ್ದಾರೆ. ಒತ್ತಡಕ್ಕೂ ಒಳಗಾಗಿ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಲ್ಲಿನ ಸಮರ್ಪಣಾ ಭಾವ ದೊಡ್ಡದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಂದು ತಿಂಗಳು ಉಚಿತ ಹೆರಿಗೆ: ಮುರುಘಾಮಠ ಸಾಮಾಜಿಕ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿದೆ. ಒಂದು ತಿಂಗಳು ಬಸವೇಶ್ವರ ಆಸ್ಪತ್ರೆಯಲ್ಲಿ ಹೆರಿಗೆ ಸಂಬಂಧ ಉಚಿತ ತಪಾಸಣೆ, ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಬಡ, ಮಧ್ಯಮ ವರ್ಗದವರ ಆಶಾಕಿರಣವಾಗಿದೆ ಎಂದು ಕಾಲೇಜಿನ ಡೀನ್ ಡಾ.ಜಿ. ಪ್ರಶಾಂತ ತಿಳಿಸಿದರು.

ನಮ್ಮಲ್ಲಿ ಮೆಮೋಗ್ರಫಿ ಸೌಲಭ್ಯವಿದೆ. ಯಾವುದೇ ರೀತಿಯ ಕ್ಯಾನ್ಸರ್ ಇರಲಿ ಮೊದಲ ಹಂತದಲ್ಲಿ ಪತ್ತೆಯಾದರೆ, ಅದನ್ನು ಗುಣಪಡಿಸಬಹುದು ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರವೀಂದ್ರ ಮಾತನಾಡಿ, ಆಶಾ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಂದ್ರಶೇಖರ ಕಂಬಾಳಿ ಮಠ ಮಾತನಾಡಿ, ಜಿಲ್ಲಾದ್ಯಂತ ಪ್ರತಿ ಮನೆಗೆ ಭೇಟಿ ನೀಡಿ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಕುರಿತು ಅರಿವು ಮೂಡಿಸಲಾಗುತ್ತಿದೆ. ರೋಗ ಲಕ್ಷಣಗಳಿದ್ದರೆ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದರು.

ಇನ್ನೆರಡು ತಿಂಗಳಲ್ಲಿ ನಗರದ ಜಿಲ್ಲಾಸ್ಪತ್ರೆಯಲ್ಲೇ ಸುಸಜ್ಜಿತವಾದ ಕ್ಯಾನ್ಸರ್ ಚಿಕಿತ್ಸಾ ಘಟಕ ಆರಂಭವಾಗಲಿದೆ. ಅದರ ಸದುಪಯೋಗ ರೋಗಿಗಳು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಅಭಿನವ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಗೆ ಬಲ ತುಂಬುವ ಕೆಲಸ ಮಾಡುತ್ತಿದ್ದಾರೆ. 15ರಿಂದ 40 ವರ್ಷದವರೆಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಹೀಗಾಗಿ ರೋಗ ಲಕ್ಷಣ ಗುರುತಿಸಲು ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಡಾ.ರಾಜೇಶ್, ಡಾ.ಪಾಲಾಕ್ಷಪ್ಪ, ಡಾ.ಗೀತಾ ಪಾಲಾಕ್ಷಪ್ಪ, ಡಾ.ನಾರಾಯಣಮೂರ್ತಿ, ಡಾ.ಹರ್ಷಿತಾ, ಡಾ.ಲತಾ, ಡಾ.ಸೌಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net