ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಕ್ಕೆ ಆಗ್ರಹ

09_02_Mdy_02(Protest)
Published on

ಮಂಡ್ಯ: ಸುಮಾರು 45 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕ್ಯಾನ್ಸರ್ ಆಸ್ಪತ್ರೆಯನ್ನು ಶೀಘ್ರ ಪ್ರಾರಂಭಿಸುವಂತೆ ಒತ್ತಾಯಿಸಿ ಕನ್ನಡ ಸೇನೆ ಕರ್ನಾಟಕ ಸಂಘಟನೆಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.


ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಆಸ್ಪತ್ರೆ ಪ್ರಾರಂಭಕ್ಕೆ ತುರ್ತು ಕ್ರಮ ವಹಿಸುವಂತೆ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.


ಜಿಲ್ಲೆಯ ಸಹಸ್ರಾರು ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಫೆರಿಫೆರಿಲ್ ಕ್ಯಾನ್ಸರ್ ಆಸ್ಪತ್ರೆಗೆ ಗ್ರಹಣ ಹಿಡಿದಿದೆ. ಪರಿಣಾಮ ಜಿಲ್ಲೆಯ ರೋಗಿಗಳು ಬೆಂಗಳೂರಿನಲ್ಲಿರುವ ಕಿದ್ವಾಯಿಗೆ ಹೋಗುವಂತಹ ಪರಿಸ್ಥಿತಿ ಬಂದೊದಗಿದೆ. ಜಿಲ್ಲೆಯ ಹಲವು ದಿಗ್ಗಜರ ಪ್ರಯತ್ನದ ಫಲವಾಗಿ ಜಿಲ್ಲಾ ಕ್ಯಾನ್ಸರ್ ನಿಯಂತ್ರಣ ಯೋಜನೆಯಡಿ 1994 ಫೆ.5ರಂದು ಆಸ್ಪತ್ರೆ ಪ್ರಾರಂಭವಾಯಿತು. ಇದಾದ ಹಲವು ವರ್ಷ ಉತ್ತಮ ಸೇವೆಯೂ ಲಭ್ಯವಿತ್ತು. ಮಂಡ್ಯ ಮಾತ್ರವಲ್ಲದೆ ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಸೇರಿದಂತೆ ಹಲವೆಡೆ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಆದರೀಗ ಆಸ್ಪತ್ರೆಗೆ ಕಾಯಕಲ್ಪ ಸಿಗದೆ ದುಸ್ಥಿತಿ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ರಮ್ಯಾ ಅವರು ಸಂಸದೆಯಾಗಿದ್ದಾಗ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಮಂಜೂರಾತಿ ಕೊಡಲಾಗಿತ್ತು. ಅನುದಾನವೂ ಬಿಡುಗಡೆಯಾಗಿತ್ತು. ಆದರೆ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷೃದಿಂದಾಗಿ ಆಸ್ಪತ್ರೆ ಹಾಳಾಗಿದೆ. ಇಷ್ಟಾದರೂ ಸಂಬಂಧಪಟ್ಟವರು ಗಮನಹರಿಸದಿರುವುದು ದುರಂತ. ಆದ್ದರಿಂದ ಇನ್ನು 15 ದಿನದೊಳಗೆ ಆಸ್ಪತ್ರೆ ಪ್ರಾರಂಭವಾಗದಿದ್ದರೆ ನಿರಂತರ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.


ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಮಂಜು, ಮಹಾಂತಪ್ಪ, ಸೌಭಾಗ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net