ಕ್ಯಾದಿಗೆರೆಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ

Bus
Published on

ಚಿತ್ರದುರ್ಗ: ತಾಲೂಕಿನ ಕ್ಯಾದಿಗೆರೆ ಮಾರ್ಗಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಬುಧವಾರದಿಂದ ಆರಂಭವಾಗಿದ್ದು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ನಾರಿಯರು ಅತ್ಯುತ್ಸಾಹದಿಂದ ಬಸ್ ಏರಿ ತಲುಪಬೇಕಾದ ಸ್ಥಳಗಳಿಗೆ ಪಯಣ ಬೆಳೆಸಿದರು.

ತಾಲೂಕಿನ ಕ್ಯಾದಿಗೆರೆ ಗ್ರಾಮದಿಂದ ದೊಡ್ಡಸಿದ್ದವ್ವನಹಳ್ಳಿ ಸರ್ಕಾರಿ ಪ್ರೌಢಶಾಲೆ ತಲುಪಲು 3ರಿಂದ 5 ಕಿ.ಮೀ ಕಾಲ್ನಡಿಗೆ ಮೂಲಕ ವಿದ್ಯಾರ್ಥಿಗಳು ಸಂಚರಿಸುತ್ತಿದ್ದರು. ಸಾರಿಗೆ ವ್ಯವಸ್ಥೆ ಇಲ್ಲದೆ, ನಿತ್ಯ ಸಮಸ್ಯೆಗೆ ಸಿಲುಕುತ್ತಿದ್ದರು. ಈ ಕುರಿತು ‘ವಿಜಯವಾಣಿ’ ಬೆಳಕು ಚೆಲ್ಲಿತ್ತು. ವರದಿ ಪ್ರಕಟವಾದ ಆರು ದಿನದೊಳಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಿರುವುದು ಗ್ರಾಮಸ್ಥರಲ್ಲೂ ಸಂತಸ ಉಂಟು ಮಾಡಿದೆ.

ಗ್ರಾಮದಿಂದ ಬರುವ ವಿದ್ಯಾರ್ಥಿಗಳು ಮಳೆಗಾಲದಲ್ಲಿ ನೆನೆದು ಅನಾರೋಗ್ಯಕ್ಕೀಡಾಗಿ ಹೈರಾಣಾಗುತ್ತಿದ್ದರು. ರಕ್ತಹೀನತೆಯ ಸಮಸ್ಯೆ ಉಳ್ಳವರು ಇದಕ್ಕೆ ಹೊರತಲ್ಲ. ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ದಾರಿಯಲ್ಲಿ ಹೆದರಿಸುವುದು, ಅಡ್ಡಗಟ್ಟಿ ಚುಡಾಯಿಸುವ ಪೋಕರಿಗಳ ಕಾಟವೂ ಇತ್ತು. ಆಯಾಸ, ಉಬ್ಬಸ, ಹೃದಯ ಸಂಬಂಧಿ ಕಾಯಿಲೆಯುಳ್ಳ ವಿದ್ಯಾರ್ಥಿಗಳು ಕಾಲ್ನಡಿಯಲ್ಲಿ ಬರಲಾಗದೆ, ಗೈರು ಹಾಜರಾಗುತ್ತಿದ್ದರು. ಇದಕ್ಕೀಗ ಪರಿಹಾರ ಸಿಕ್ಕಿದಂತಾಗಿದೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದದ್ದು ಕಂಡು ಬಂದಿತು.

ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಸಾರಿಗೆ ಸೌಲಭ್ಯ ಕಲ್ಪಿಸಿರುವುದು ಕೆಲ ದಿನ, ತಿಂಗಳಿಗೆ ಸೀಮಿತವಾಗದೆ, ನಿರಂತರವಾಗಿ ಮುಂದುವರಿಯಲಿ. ಸಂಸ್ಥೆ ಅಧಿಕಾರಿಗಳು ಗಮನಹರಿಸಿ ಸ್ಪಂದಿಸಿದ್ದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net