ಕ್ಯಾತಮಾರನಹಳ್ಳಿಯ ವಿವಾದಿತ ಸ್ಥಳದಲ್ಲಿ ಮದರಸಾ ತೆರೆಯಲು ಅನುಮತಿ

Published on

ಮೈಸೂರು: ಕ್ಯಾತಮಾರನಹಳ್ಳಿಯಲ್ಲಿನ ವಿವಾದಿತ ಸ್ಥಳದಲ್ಲಿ ಮದರಸಾ ನಡೆಸಲು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಅನುಮತಿ ನೀಡಿದ್ದಾರೆ.

ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಎರಡು ಕೋಮಿನ ಮುಖಂಡರ ಸಭೆ ನಡೆಸಿದ್ದ ಡಿಸಿ, ಅಂತಿಮವಾಗಿ ಮುಸ್ಲಿಂ ಮುಖಂಡರ ಮನವಿಗೆ ಮನ್ನಣೆ ನೀಡಿ ಮದರಸಾ ನಡೆಸಲು ಅವಕಾಶ ಕಲ್ಪಿಸಿದ್ದಾರೆ. ಈ ಸಂಬಂಧ ಗುರುವಾರ ಹೈಕೋರ್ಟ್‌ಗೆ ಜಿಲ್ಲಾಧಿಕಾರಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ ಎಂಬುದು ತಿಳಿದು ಬಂದಿದೆ.

ಗಾಯತ್ರಿಪುರಂ 2ನೇ ಹಂತದಲ್ಲಿರುವ ಹಲೀಂ ಸಾದಿಯಾ ಶೈಕ್ಷಣಿಕ ಸಂಸ್ಥೆ ಮತ್ತು ಮಸ್ಜಿದ್ ಎ ಸಿದ್ದಿಖಿ ಅಕ್ಬರ್ ಟ್ರಸ್ಟ್ ವಿವಾದಿತ ಸ್ಥಳವನ್ನು ಖರೀದಿಸಿ ಮಸೀದಿ ಮತ್ತು ಮದರಸಾ ನಡೆಸಲು ಮುಂದಾಗಿತ್ತು. ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಸೀದಿ ಸ್ಥಾಪನೆಗೆ ಆಕ್ಷೇಪವ್ಯಕ್ತಪಡಿಸಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಅವರ ಹತ್ಯೆ 2016ರಲ್ಲಿ ನಡೆಯಿತು. ಈ ಹಿನ್ನೆಲೆಯಲ್ಲಿ ಮೈಸೂರು ಸುವ್ಯವಸ್ಥೆಗೆ ಭಂಗವಾಗಲಿದೆ ಎಂದು ಮಸೀದಿಗೆ ಬೀಗ ಹಾಕಲಾಗಿತ್ತು.

ಕೆಲ ತಿಂಗಳ ಬಳಿಕ ಟ್ರಸ್ಟ್‌ನ ಸದಸ್ಯರು ಅನೇಕ ಸಲ ಮಸೀದಿ ಬೀಗ ತೆರವಿಗೆ ಮನವಿ ಸಲ್ಲಿಸಿದ್ದರೂ ಜಿಲ್ಲಾಡಳಿತ ಅನುಮತಿ ಕೊಟ್ಟಿರಲಿಲ್ಲ. ಆದ್ದರಿಂದ ಟ್ರಸ್ಟ್‌ನ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು.

ಹೈಕೋರ್ಟ್ ಕೂಡ ಸಭೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಕಾನೂನು ಸುವ್ಯವಸ್ಥೆ ಭಂಗವಾಗಲಿದೆ ಎಂದು ಹೈಕೋರ್ಟ್‌ಗೆ ಜಿಲ್ಲಾಡಳಿತ ತಿಳಿಸಿತ್ತು. ಆದರೆ, ಇದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿಗಳು ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದರು.

ತ್ವರಿತವಾಗಿ ಎರಡು ಸಮುದಾಯಗಳ ಮುಖಂಡರ ಸಭೆ ನಡೆಸಿ ವರದಿ ಸಲ್ಲಿಸಿ ಎಂದು ನಿರ್ದೇಶಿಸಿದ್ದರು. ಮಂಗಳವಾರ ಎರಡು ಕೋಮಿನ ಮುಖಂಡರ ಸಭೆ ಕರೆದು ಮನವಿ ಆಲಿಸಿದ ಡಿಸಿ, ಅಂತಿಮವಾಗಿ ಟ್ರಸ್ಟ್‌ನ ಸದಸ್ಯರ ಮನವಿ ಮೇರೆಗೆ ಮದರಸಾ ತೆರೆಯಲು ಅನುಮತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net