

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನ ಇರಿಗೇನಹಳ್ಳಿ, ಹಾರೋಹಳ್ಳಿ, ಐವಿಸಿ ರಸ್ತೆ ಮತ್ತಿತರ ರೈಲ್ವೆ ಕೆಳಸೇತುವೆಗಳನ್ನು ಮಂಗಳವಾರ ಪರಿಶೀಲನೆ ನಡೆಸಿದ ವಸತಿ ಸಚಿವ ಸೋಮಣ್ಣ ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ಹಿಂದಿಯಲ್ಲಿ ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು. ಕಾಮಗಾರಿ ಅವ್ಯವಸ್ಥೆ ಬಗ್ಗೆ ಇಂಜಿನಿಯರ್ ಹಿಂದಿಯಲ್ಲಿಯೇ ವಿವರಿಸಲು ಹೋದಾಗ ಹಿಂದಿಯಲ್ಲಿಯೇ ತರಾಟೆ ತೆಗೆದುಕೊಂಡ ಸಚಿವರು ಹೇ ಕ್ಯಾ ಕಾಮ್ ಕಿಯಾ ಹೈ, ಅಚ್ಚಾ ನಹೀ ಹೈ ಎಂದು ಗರಂ ಆದರು, ಹಿಂದಿ ಜತೆಯಲ್ಲಿ ಇಂಗ್ಲೀಷ್ ಭಾಷೆ ಮಿಶ್ರಣದೊಂದಿಗೆ ಚಳಿ ಬಿಡಿಸಿದರು. ಇದಕ್ಕೆ ಧ್ವನಿ ಗೂಡಿಸಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸಚಿವರ ಆಕ್ರೋಶದ ಮಾತುಗಳನ್ನು ಇಂಗ್ಲಿಷ್‌ನಲ್ಲಿ ಇಂಜಿನಿಯರ್‌ಗೆ ಅರ್ಥ ಮಾಡಿಸುವ ಪ್ರಯತ್ನ ನಡೆಸಿದರು.
ಮಳೆ ಯಾಕೆ ಬರುತ್ತೋ ಅಂತಾರೆ ಜನ: ಸಮರ್ಪಕ ತಾಂತ್ರಿಕತೆ ಬಳಸದೆ ನಿರ್ಮಾಣ ಮಾಡಿವು ರೈಲ್ವೇ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಸಾರ್ವಜನಿಕರ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಮಳೆ ಬಂದರೆ ಕೆಸರುಗದ್ದೆಯಂತಾಗುತ್ತದೆ ಜನರೇ ಏಕೆ ಮಳೆ ಬರುತ್ತೋ ಎಂದು ಕೊರಗುವ ಸ್ಥಿತಿಗೆ ತರಲಾಗಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಶೀಘ್ರ ದುರಸ್ತಿ:ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಕೆಲವೊಂದು ಅಂಡರ್‌ಪಾಸ್‌ಗಳು ಶಿಥಿಲಗೊಂಡಿದ್ದು, ಕೂಡಲೇ ಅವುಗಳ ನವೀಕರಣಕ್ಕೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು. ಈ ಭಾಗದಲ್ಲಿ ಪರಿಶೀಲನೆ ವೇಳೆ 20ಕ್ಕೂ ಹೆಚ್ಚು ಅಂಡರ್‌ಪಾಸ್‌ಗಳಲ್ಲಿ ಅವ್ಯವಸ್ಥೆ ಇರುವುದು ಗಮನಕ್ಕೆ ಬಂದಿದೆ ಎಂದರು.
ಜನಸ್ನೇಹಿಯಾಗಿರಬೇಕು: ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು, ರೈಲ್ವೆ ಗೇಟ್, ಕ್ರಾಸಿಂಗ್‌ಗಳನ್ನು ತೆರವುಗೊಳಿಸಿ, ರೈಲ್ವೆ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿದೆ, ಆದರೆ ಇವುಗಳ ಸದ್ದುದ್ದೇಶವೇ ಈಡೇರದಂತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜಿಲ್ಲೆಯ ರೈಲ್ವೆ ಅಂಡರ್‌ಪಾಸ್‌ಗಳಿಗೆ ಮಳೆಗಾಲದಲ್ಲಿ ಕೆರೆಕೋಡಿ ಹರಿದು, ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ ಇದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ. ಅವೈಜ್ಞಾನಿಕ ಕಾಮಗಾರಿಗಳನ್ನು ಸರಿಪಡಿಸಿ ಶೀಘ್ರವೇ ಸಾರ್ವಜನಿಕ ಸ್ನೇಹಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು. ರೈಲ್ವೆ ಇಲಾಖೆಯ ವಿಶೇಷ ಪರಿಶೀಲನಾ ಬೋಗಿಯಲ್ಲಿ ಯರ್ತಿಗಾನಹಳ್ಳಿ, ಐವಿಸಿ ರಸ್ತೆ, ಬುಳ್ಳಳ್ಳಿ, ಇರಿಗೇನಹಳ್ಳಿಗಳಿಗೆ ಈಗಾಗಲೇ ಭೇಟಿ ನೀಡಿದ್ದೇನೆ. ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶ್ರೀನಿವಾಸಪುರ ವಿಭಾಗಗಳಲ್ಲೂ ಇದೇ ಪರಿಸ್ಥಿತಿ ಇದೆ. ಈ ಕೂಡಲೇ ತಾಂತ್ರಿಕವಾಗಿ ಸಮಸ್ಯೆ ಪರಿಹರಿಸಲು ಸೂಚಿಸಲಾಗಿದೆ. ಇನ್ನು ಎರಡ್ಮೂರು ತಿಂಗಳಲ್ಲಿ ದುರಸ್ತಿ ಕಾರ್ಯ ಮುಗಿಯಲಿದೆ ಎಂದು ತಿಳಿಸಿದರು.
ಶಾಸಕರನ್ನು ಕೊಂಡಾಡಿದ ಸಚಿವರು: ಪರಿಶೀಲನೆಯುದ್ದಕ್ಕೂ ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಕೊಂಡಾಡಿದ ಸಚಿವರು, ಇವರ ಒತ್ತಾಸೆ ಮೇರೆಗೆ ಪರಿಶೀಲನೆ ಬಂದಿದ್ದೇನೆ ಎಂದು ಹೇಳಿದರು. ಅಧಿವೇಶದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಆಗಲೇ ಅವರಿಗೆ ಮಾತು ಕೊಟ್ಟಿದ್ದೆ ಇವರ ಮೇಲಿನ ಅಭಿಮಾನದಿಂದ ತಕ್ಷಣವೇ ಓಡಿ ಬಂದಿದ್ದೇನೆ ಎಂದು ಹೇಳಿದರು. ಸಚಿವರನ್ನು ಬೀಳ್ಕೊಡುವ ವೇಳೆ ಸಚಿವರಿಗೆ ನಮಸ್ಕರಿಸಿ ತಬ್ಬಿಕೊಂಡ ಶಾಸಕರು ಭಾವೋದ್ವೇಗ ವ್ಯಕ್ತಪಡಿಸಿದರು.