

ಚಾಮರಾಜನಗರ: ಪ್ರಸ್ತುತ ಸಂಧರ್ಭದಲ್ಲಿ ಉದ್ಯೋಗ ಪಡೆಯಲು ಶಿಕ್ಷಣದೊಂದಿಗೆ ಕೌಶಲ ಹೊಂದಿರುವುದು ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಓದಿನ ಜತೆಗೆ ಕೌಶಲ ಶಿಕ್ಷಣದ ಕಡೆ ಹೆಚ್ಚು ಆದ್ಯತೆ ನೀಡಬೇಕು ಎಂದು ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಹಾಗೂ ಸೈಬರ್ ಸುರಕ್ಷತಾ ತಜ್ಞ ಡಾ.ಉದಯ ಶಂಕರ ಪುರಾಣಿಕ್ ಸಲಹೆ ಮಾಡಿದರು.
ಚಾಮರಾಜನಗರ ವಿಶ್ವವಿದ್ಯಾನಿಲಯದ ಸುವರ್ಣ ಗಂಗೋತ್ರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಚಾಮರಾಜನಗರ ವಿಶ್ವವಿದ್ಯಾನಿಲಯದ ದ್ವಿತೀಯ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್), ಸೈಬರ್ ಸುರಕ್ಷತೆ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಹೆಚ್ಚು ಅವಕಾಶಗಳು ಇವೆ. ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ಸುಮಾರು 4.5 ಕೋಟಿ ಉದ್ಯೋಗಗಳು ಇವೆ. ತಂತ್ರಜ್ಞಾನದ ಬಗ್ಗೆ ಇರುವ ಭಯದಿಂದ ವಿಮುಕ್ತರಾಗಿ ವಿದ್ಯಾರ್ಥಿಗಳು ಇಂದಿನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇರುವ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಬೇಕು. ಕೌಶಲ ಶಿಕ್ಷಣದತ್ತ ಒಲವು ತೋರಬೇಕು ಎಂದರು.
ಭವಿಷ್ಯದ ದೃಷ್ಟಿಯಿಂದ ಉದ್ಯೋಗಕ್ಕೆ ಹೆಚ್ಚು ಅವಕಾಶಗಳಿರುವ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಕಲಿಯಲು ವಿದ್ಯಾರ್ಥಿಗಳು ಮುಂದಾಗಬೇಕು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಉಪಗ್ರಹ ತಂತ್ರಜ್ಞಾನದಲ್ಲಿ ಕರ್ನಾಟಕದವರು ಚಿಕ್ಕವಯಸ್ಸಿನಲ್ಲಿಯೇ ಗಮನಸೆಳೆಯುವ ಅಪಾರ ಸಾಧನೆ ಮಾಡಿದ್ದಾರೆ. ಇಂತಹವರ ಬಗ್ಗೆ ಹೆಚ್ಚು ತಿಳಿದುಕೊಂಡರೆ ಅವರ ಸಾಧನೆ ನಿಮಗೆ ಸ್ಪೂರ್ತಿಯಾಗಲಿದೆ. ಉದ್ಯೋಗ ಸಿಗುವುದಿಲ್ಲ ಎಂಬ ನಿರಾಸೆ ಭಾವ ಬಿಟ್ಟು ಇಂದಿನ ದಿನಮಾನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿರುವ ವ್ಯಕ್ತಿಗಳನ್ನು ಆದರ್ಶಪ್ರಾಯವಾಗಿರಿಸಿಕೊಳ್ಳಿ ಎಂದು ತಿಳಿಸಿದರು.
ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದೆ, ಕೌಶಲ ತಂತ್ರಜ್ಞಾನಗಳ ತಿಳಿವಳಿಕೆ ತರಬೇತಿ ಇಲ್ಲದಿದ್ದರೆ ಉದ್ಯೋಗಕ್ಕೆ ಕಷ್ಟವಾಗಬಹುದು ಇದಕ್ಕಾಗಿಯೇ ವಿಶ್ವ ವಿದ್ಯಾನಿಲಯ ಹೆಸರಾಂತ ಸಂಸ್ಥೆಗಳ ಸಹಯೋಗದೊಂದಿಗೆ ಒಡಂಬಡಿಕೆ ಮಾಡಿಕೊಂಡು ಸರ್ಟಿಫಿಕೇಟ್ ಕೋರ್ಸ್ಗಳನ್ನು ಆರಂಭಿಸಿದೆ. ವ್ಯಾಸಾಂಗದ ಅವಧಿಯಲ್ಲಿಯೇ ತಂತ್ರಜ್ಞಾನ ಶಿಕ್ಷಣವನ್ನು ನೀಡುವ ತರಬೇತಿ ನಡೆಸುತ್ತಿದೆ ಎಂದರು.
ಬೆಳಗಾವಿಯ ಥೀಟಾ ಡೈನಾಮಿಕ್ ಪ್ರೈ.ಲಿ.ನ ಚೀಫ್ ಎಕ್ಸಿಕ್ಯುಟೀವ್ ಆಫೀಸರ್ ಗಜೇಂದ್ರ ದೇಶಪಾಂಡೆ ಮಾತನಾಡಿ, ವಿದ್ಯಾರ್ಥಿಗಳು ಪ್ರಯತ್ನಶೀಲರಾಗಬೇಕು. ಇಂಗ್ಲೀಷ್ ಚೆನ್ನಾಗಿ ಬರುವುದಿಲ್ಲವೆಂಬ ಕೀಳರಿಮೆ ಬೇಡ. ಎಷ್ಟೋ ದೇಶಗಳಲ್ಲಿ ಅವರ ಮಾತೃಭಾಷೆಯಲ್ಲಿಯೇ ಹೆಚ್ಚು ತಿಳಿದು ಉನ್ನತ ತಂತ್ರಜ್ಙಾನ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ರೀಚ್ ಮಚ್ ಹೈಯರ್ ಚೀಫ್ ಅಡ್ವೆಸರ್ ಡಾ.ಒ.ಪಿ.ಗೋಯಲ್, ಕುಲಸಚಿವ (ಆಡಳಿತ) ಆರ್.ಲೋಕನಾಥ, ಪರೀಕ್ಷಾಂಗ ಕುಲಸಚಿವ ಡಾ.ಜಿ.ವಿ.ವೆಂಕಟರಮಣ ಉಪಸ್ಥಿತರಿದ್ದರು.