

ಚಿತ್ರದುರ್ಗ: ಕರ್ನಾಟಕ ಕೌಶಲಾಭಿವೃದ್ಧಿ ನಿಗಮ ಅಧ್ಯಕ್ಷೆ ಶಿವಕಾಂತಮ್ಮ ನಾಯಕ ಅವರು ಮಂಗಳವಾರ ಚಿತ್ರದುರ್ಗ ನಗರದ ವಿವಿಧ ಕೌಶಲ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಇಂಡಸ್ಟ್ರಿ ಲಿಂಕೇಜ್ ಸೇಲ್(ಐಎಲ್‌ಸಿ) ಮತ್ತು ಸ್ಥಳ ನಿಯುಕ್ತಿಗಾಗಿ ಲೆಟರ್ ಆಫ್ ಇಂಡೆಂಟ್‌ನಲ್ಲಿ ನೋಂದಣಿ ಆಗಿರುವ ತರಬೇತಿ ಸಂಸ್ಥೆಗಳ ಮಾಹಿತಿ ಹಾಗೂ ನೋಂದಾಯಿತ ಖಾಸಗಿ ತರಬೇತಿ ಸಂಸ್ಥೆಗಳ ಮಾಹಿತಿ ಪಡೆದುಕೊಂಡರು.
ಸಂಕಲ್ಪ ಯೋಜನೆಯಡಿ 2022-23ನೇ ಸಾಲಿನಲ್ಲಿ, ತರಬೇತಿ ಪಡೆದ ಫಲಾನುಭವಿಗಳಿಗೆ ವಿತರಿಸಿರುವ ಹೊಲಿಗೆ ಯಂತ್ರಗಳನ್ನು ಪರಿಶೀಲಿಸಿದರು. ನಂತರ ಸೇವಾ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿ ತರಬೇತಿ ಸಂಸ್ಥೆ ವೀಕ್ಷಿಸಿ, ತರಬೇತಿ ಪಡೆಯುತ್ತಿರುವ ಫಲಾನುಭವಿಗಳನ್ನು ಸಂದರ್ಶಿಸಿದರು.
ನಂತರ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಕಚೇರಿಗೆ ವ್ಯಾಪ್ತಿಗೆ ಒಳಪಡುವ ಕಾತ್ರಾಳ್ ವಿದ್ಯಾಪೀಠಕ್ಕೆ ಭೇಟಿ ನೀಡಿ, ವಿದ್ಯಾಪೀಠದ ಸುರಕ್ಷತೆಗಾಗಿ ಜಿಲ್ಲಾ ನಿರ್ಮಿತಿ ಕೇಂದ್ರದವರು ನಿರ್ಮಿಸುತ್ತಿರುವ ಕಾಂಪೌಂಡ್ ಕಾಮಗಾರಿ ವೀಕ್ಷಿಸಿದರು.
ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಟಿ.ವೇಮಣ್ಣ, ಸಹಾಯಕ ನಿರ್ದೇಶಕ ಡಿ.ಉಮೇಶ್, ನಿರ್ಮಿತಿ ಕೇಂದ್ರದ ಸಹಾಯಕ ಇಂಜಿನಿಯರ್ ಮಧುಸೂಧನ್ ಮತ್ತಿತರರು ಇದ್ದರು.