ಕೌಶಲಾಭಿವೃದ್ಧಿ ಶಿಕ್ಷಣದ ಭಾಗವಾಗಬೇಕು

h2-Deshapande Skilling 1
Published on

ಹುಬ್ಬಳ್ಳಿ: ಉದ್ಯೋಗ ಪಡೆಯಲು ಪೂರಕವಾದ ಕೌಶಲವನ್ನು ನಮ್ಮ ವಿದ್ಯಾರ್ಥಿ-ಯುವಜನರಿಗೆ ಕಲಿಸಿಕೊಟ್ಟರೆ ಮಾತ್ರ ಲಭ್ಯ ಅವಕಾಶವನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ದೇಶದ ಹಾಗೂ ವ್ಯಕ್ತಿಯ ಅಭಿವೃದ್ದಿಗೆ ಕೌಶಲಾಭಿವೃದ್ಧಿಯು ಶಿಕ್ಷಣದ ಎಲ್ಲ ಹಂತದಲ್ಲೂ ಒಂದು ಭಾಗವಾಗಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.

ಇಲ್ಲಿಯ ಗೋಕುಲದ ದೇಶಪಾಂಡೆ ಪ್ರತಿಷ್ಠಾನದ ಆವರಣದಲ್ಲಿ ದೇಶಪಾಂಡೆ ಸ್ಕಿಲ್ಲಿಂಗ್​ಅನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವ ವಿದ್ಯಾಲಯಗಳು, ಕಾಲೇಜ್​ಗಳಿಗೆ ಉದ್ಯಮಿಗಳು ಸಹಭಾಗಿತ್ವ ನೀಡಿ, ಯುವಜನರ ಕೌಶಲ ವೃದ್ಧಿಸುವ ಹಾಗೂ ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ವಾತಂತ್ರ್ಯ ಬಂದ ಮೇಲೆ ಮೊದಲು ಜನಪರ ಯೋಜನೆಗಳಿಗೆ ಆದ್ಯತೆ ಕೊಡಲಾಯಿತು. ಈಗ ಪ್ರತಿಯೊಬ್ಬ ಭಾರತೀಯರ ಔದ್ಯೋಗಿಕ ಸಾಮರ್ಥ್ಯ ವೃದ್ಧಿಗೆ ಅಗತ್ಯವಾದ ಕೌಶಲವನ್ನು ಗುರುತಿಸಿ, ನೈಪುಣ್ಯ ಸಾಧಿಸಲು ಒತ್ತು ನೀಡಬೇಕಿದೆ. ಅದಕ್ಕಾಗಿ ಕೇಂದ್ರ ಸರ್ಕಾರವು ಕೌಶಲಾಭಿವೃದ್ಧಿ ನೂತನ ಆಂದೋಲನವನ್ನು ಆರಂಭಿಸಿದೆ. ದೇಶದಲ್ಲಿ ಇದುವರೆಗೆ 85 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳ ಕೌಶಲಾಭಿವೃದ್ಧಿ ಮಾಡಲಾಗಿದೆ. ಈ ಸಂಖ್ಯೆಯನ್ನು ಇನ್ನೂ ಹೆಚ್ಚಿಸಬೇಕು. ಆ ನಿಟ್ಟಿನಲ್ಲಿ ಖಾಸಗಿ ರಂಗದಲ್ಲಿ ದೇಶಪಾಂಡೆ ಕೌಶಲಾಭಿವೃದ್ಧಿ ಕೇಂದ್ರಗಳಂತಹ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅದಕ್ಕಾಗಿ, ಏಕಕಾಲಕ್ಕೆ 1500ಕ್ಕೂ ಹೆಚ್ಚಿನ ಯುವಜನರಿಗೆ ಕೌಶಲಾಭಿವೃದ್ಧಿ ನೀಡುವ ಕೇಂದ್ರ ಆರಂಭಿಸಿದ್ದಕ್ಕೆ ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಗುರುರಾಜ ದೇಶಪಾಂಡೆ, ಜಯಶ್ರೀ ದೇಶಪಾಂಡೆ ಅವರನ್ನು ಅಭಿನಂದಿಸುವೆ ಎಂದರು.

ಭಾರತದಲ್ಲಿ ಎಲ್ಲ ನದಿಗಳು ಮಾಲಿನ್ಯಗೊಂಡಿವೆ. ಅರಣ್ಯ ಪ್ರದೇಶ ಕಡಿಮೆಯಾಗಿದೆ. ಅರಣ್ಯ ಹಾಗೂ ಪರಿಸರವನ್ನು ನಾವೇ ದುರುಪಯೋಗ ಪಡಿಸಿಕೊಂಡಿದ್ದು, ಈಗಲಾದರೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ.

ಉತ್ತಮ ಕೃಷಿ ವ್ಯವಸ್ಥೆ ಮೂಲಕ ದೇಶದ ರೈತಾಪಿ ಜನರ ವಿಶ್ವಾಸ ವೃದ್ಧಿಸುವ ಕಾರ್ಯಕ್ಕೆ ಮುಂದಾಗಬೇಕು. ಎಲ್ಲವನ್ನೂ ಸರ್ಕಾರ ಮಾಡುತ್ತದೆ, ತಾವು ಆರಾಮ್ ಕುಳಿತುಕೊಳ್ಳೋಣ ಎಂಬ ಮನೋಭಾವ ದೇಶದ ಜನರಲ್ಲಿ ಬೆಳೆದಿದೆ. ಇದನ್ನು ಕಿತ್ತೊಗೆಯಬೇಕು. ಜಾಗತೀಕರಣದ ಕಾಲ ಇದು. ಎಲ್ಲರಿಗೂ ಎಲ್ಲ ಕಡೆಯೂ ಅವಕಾಶ ಇದೆ. ಖಾಸಗಿ ವಲಯದಲ್ಲಿ ಔದ್ಯೋಗಿಕ ಸಾಮರ್ಥ್ಯವೇ ಮಾನದಂಡವಾಗಿರುತ್ತದೆ. ಆದ್ದರಿಂದ ಮಾನಸಿಕವಾಗಿ ದೈಹಿಕವಾಗಿ ಸಿದ್ಧರಾಬೇಕು. ಕೌಶಲ ಅಭಿವೃದ್ಧಿಯ ಮೂಲಕ ಸವಾಲು ಎದುರಿಸುವ ಸಾಮ್ಯರ್ಥ ಹೆಚ್ಚಿಸಿಕೊಳ್ಳಬೇಕು ಎಂದರು.

ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನೂತನ ಕೇಂದ್ರದಲ್ಲಿ ವರ್ಷಕ್ಕೆ 8 ಸಾವಿರ ಜನರಿಗೆ ತರಬೇತಿ ನೀಡುವ ವ್ಯವಸ್ಥೆ ಇದೆ ಎಂದು ಅವರು ವಿವರಿಸಿದರು.

ಫೌಂಡೇಶನ್ ಸಹ ಸಂಸ್ಥಾಪಕಿ ಜಯಶ್ರೀ ಗುರುರಾಜ ದೇಶಪಾಂಡೆ, ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ ವೇದಿಕೆಯಲ್ಲಿದ್ದರು. ಸಿ.ಎಂ. ಪಾಟೀಲ ವಂದಿಸಿದರು. ಇದೇ ವೇಳೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರನ್ನು ಹು-ಧಾ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಭೇಟಿಯಾಗಿ ಸನ್ಮಾನಿಸಿದರು.

ಮೂಲ ಮರೆಯಬೇಡಿ: ಬದುಕು ಕಟ್ಟಿಕೊಳ್ಳಲು ಯುವಜನರು ಪರಿಶ್ರಮ ಪಡಬೇಕು. ನೈಪುಣ್ಯತೆ ಗಳಿಸಿಕೊಂಡು ಅವಕಾಶ ಸಿಕ್ಕರೆ ವಿದೇಶಕ್ಕೂ ಹೋಗಿ ಸಾಧನೆ ಮಾಡಬೇಕು. ಆದರೆ ಅಲ್ಲಿಗೆ ಹೋದರೂ ದೇಶ, ರಾಜ್ಯ, ಊರು, ತಂದೆ ತಾಯಿ, ಗುರು ಹಿರಿಯರು, ಕಲಿತ ಸಂಸ್ಥೆಗಳನ್ನು ಮರೆಯಬಾರದು ಎಂದು ಉಪರಾಷ್ಟ್ರಪತಿಯವರು ಕಿವಿಮಾತು ಹೇಳಿದರು. ಹೆಚ್ಚು ಭಾಷೆ ಕಲಿಯಬೇಕು. ಆದರೂ ಕನ್ನಡಿಗರು ಮನೆಯಲ್ಲಿ ಮತ್ತು ಇನ್ನೊಬ್ಬ ಕನ್ನಡಿಗನೊಂದಿಗೆ ಕನ್ನಡದಲ್ಲೇ ಮಾತನಾಡಿ ಎಂದು ಪ್ರೋತ್ಸಾಹಿಸಿದರು. ನಮ್ಮದು ಪ್ರಜಾಪ್ರಭುತ್ವ ದೇಶ. ಭಿನ್ನಾಭಿಪ್ರಾಯ ಸಹಜ. ಆದರೆ, ಅದರ ತೀರ್ಮಾನ ಶಾಂತಿಯುತವಾಗಿಯೇ ಆಗಬೇಕು. ಹಿಂಸೆಗಿಂತಲೂ ಮತದಾನವೇ ಅತೀ ಶ್ರೇಷ್ಠ ಅಸ್ತ್ರ ಎನ್ನುವುದು ಸಾಬೀತಾಗಿದೆ. ಎಲ್ಲರೂ ಆತ್ಮವಿಶ್ವಾಸದಿಂದ, ಸಕಾರಾತ್ಮಕ ಚಿಂತನೆಗಳಿಂದ ಜೀವನ ನಡೆಸಬೇಕು. ನಕಾರಾತ್ಮಕವಾಗಿಯೇ ಯೋಚಿಸುವ, ದಾರಿ ಣತಪ್ಪಿಸುವ ಕೆಲವರಿರುತ್ತಾರೆ. ಅಂಥವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net