ಕೌಶಲಾಧಾರಿತ ಶಿಕ್ಷಣ ಪಡೆಯಿರಿ

7
Published on

ಮೈಸೂರು: ಇಂಗ್ಲಿಷ್ ಜತೆಗೆ ಕಂಪ್ಯೂಟರ್, ಕೌಶಲಾಧಾರಿತ ಶಿಕ್ಷಣ ಪಡೆಯಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕೌಶಲಾಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಕೌಶಲ ಎಂಬುದು ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರಿಗೂ ಅಗತ್ಯವಾಗಿದೆ. ಕೌಶಲ ಇರುವ ವ್ಯಕ್ತಿಗಳು ಪ್ರಪಂಚದ ಯಾವುದೇ ದೇಶದಲ್ಲಿ ಬೇಕಾದರೂ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಜಾಗತಿಕ ಮಟ್ಟದಲ್ಲಿ ಆಲೋಚಿಸಿದಾಗ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದರು.

ಆಂಗ್ಲ ಭಾಷೆಗೆ ಜಾಗತಿಕ ಮನ್ನಣೆ ಇರುವುದರಿಂದ ಬಹುತೇಕರು ಆ ಭಾಷೆ ಕಲಿಯಲು ಆಸಕ್ತಿ ತೋರುತ್ತಾರೆ. ಆದರೆ ಕಲಿಕೆಗೆ ಯಾವುದೇ ರೀತಿಯ ಭಾಷಾ ತಾರತಮ್ಯ ಇಲ್ಲ. ಸಾಧನೆಗೂ ಸಹ ಭಾಷೆ ಎಂದೂ ತೊಡಕಾಗಲ್ಲ. ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಇಂಗ್ಲಿಷ್ ಕಲಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿವೆ. ಅದನ್ನು ಬಳಸಿಕೊಂಡು ಉದ್ಯೋಗಸ್ಥರಾಗಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಎಸ್.ಎನ್. ಹೆಗ್ಡೆ ಮಾತನಾಡಿ, ಓದಿನ ಜತೆಗೆ ಒಂದಷ್ಟು ಕೌಶಲವನ್ನು ಮೈಗೂಡಿಸಿಕೊಂಡರೆ ಯಾರೂ ನಿರುದ್ಯೋಗಿಯಾಗಿ ಉಳಿಯಲು ಸಾಧ್ಯವಿಲ್ಲ. ವಿದೇಶದ ಸಾಕಷ್ಟು ಕಂಪನಿಗಳು ಭಾರತದತ್ತ ಮುಖ ಮಾಡುತ್ತಿವೆ. ಉದ್ಯೋಗ ಅವಕಾಶಗಳೂ ವೃದ್ಧಿಯಾಗಿವೆ. ಇದನ್ನು ಬಳಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಕೌಶಲ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಪ್ರಾಂಶುಪಾಲ ಪ್ರೊ.ಸೋಮಣ್ಣ, ನಿವೃತ್ತ ಕುಲಪತಿ ಎಸ್.ಎನ್. ರಾಮೇಗೌಡ, ಪ್ರೊ.ಎಸ್.ಶ್ರೀಕಂಠಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net