

ತುಮಕೂರು: ಸ್ಟಾರ್ಟ್‌ಅಪ್ ಯುಗದಲ್ಲಿ ನಿರಂತರ ಆವಿಷ್ಕಾರ, ನಾವೀನ್ಯತೆ ಹುಡುಕಾಟಗಳು ನಡೆಯುತ್ತಿದ್ದು ಹೊಸ ಹೊಸ ಕೌಶಲಗಳನ್ನು ಕರಗತ ಮಾಡಿಕೊಳ್ಳುವ ಸ್ವಭಾವ ಬೆಳೆಸಿಕೊಳ್ಳಬೇಕು ಎಂದು ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಅಧ್ಯಕ್ಷ ಪ್ರೊ.ಮಾಣಿಕರಾವ್ ಎಂ.ಸಾಲುಂಖೆ ಸಲಹೆಯಿತ್ತರು.
ತುಮಕೂರು ವಿವಿಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಮಂಗಳವಾರ 13ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವಾಣಿಜ್ಯೋದ್ಯಮದ ಕ್ಷಿಪ್ರ ಬದಲಾವಣೆ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಕೌಶಲಾಭಿವೃದ್ಧಿಗೆ ಒತ್ತುಕೊಡಬೇಕಿದೆ. ಹೊಸ ಹೊಸ ಕೌಶಲಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳಬೇಕಾದ, ಜೀವಮಾನವಿಡೀ ಕಲಿಯುವ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.
ವ್ಯವಹಾರ ಹಾಗೂ ಸಮಾಜವನ್ನು ತಂತ್ರಜ್ಞಾನವು ಮರುವ್ಯಾಖ್ಯಾನಿಸುವ ನಾಲ್ಕನೆಯ ಮಹಾಕ್ರಾಂತಿಯ ಕಾಲಘಟ್ಟದಲ್ಲಿ ನಾವಿದ್ದು, ಈ ತಾಂತ್ರಿಕ ಕ್ರಾಂತಿಯಿಂದ ನಿರುದ್ಯೋಗ ಸಮಸ್ಯೆ ಉದ್ಭವಿಸಿದೆ. ಕೌಶಲ ಹಾಗೂ ತರಬೇತಿಗಳ ಮೂಲಕ ಈ ಸಮಸ್ಯೆಗಳನ್ನು ಮೆಟ್ಟಿನಿಲ್ಲಬೇಕಿದೆ, ಇಂತಹ ಸಂದರ್ಭದಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ಜಗತ್ತಿನಲ್ಲಿ ಶೀಘ್ರವಾಗಿ ಅಭಿವೃದ್ಧಿ ಹೊಂದುವಲ್ಲಿ ಸಫಲರಾಗುತ್ತೀರ ಎಂದು ನಾನು ಆಶಾವಾದಿಯಾಗಿದ್ದೇನೆ ಎಂದು ಆಶಿಸಿದರು.
ಈ ಪದವಿಗಳು ನಿಮ್ಮ ಬದುಕು ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ದೃಢನಿಶ್ಚಯ, ಪರಿಶ್ರಮ, ಶ್ರದ್ಧೆ ಹಾಗೂ ಪ್ರಯತ್ನಗಳಿಂದ ಉನ್ನತ ಸಾಧನೆ ಮಾಡಿ, ದೇಶಕ್ಕೆ ಮಾನವ ಸಂಪನ್ಮೂಲ ವ್ಯಕ್ತಿಗಳಾಗಿ ರೂಪುಗೊಳ್ಳಿ. ನಿಮ್ಮ ಕನಸು ಸದಾ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಜಾಗೃತವಾಗಿರಲಿ. ಭವ್ಯ ಭಾರತದ ಭವಿಷ್ಯಕ್ಕಾಗಿ ವಿಶಾಲ ಮನೋಭಾವದಿಂದ, ಬದ್ಧತೆಯಿಂದ ದೇಶದಲ್ಲಿ ಕ್ರಾಂತಿಕಾರಿಕ ಬದಲಾವಣೆ ತಂದು ಯಶಸ್ವಿಗಳಾಗಿ ಎಂದು ಹಾರೈಸಿದರು.
ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಲಸಚಿವ ಪ್ರೊ.ಕೆ.ಎನ್.ಗಂಗಾನಾಯಕ್, ಮೌಲ್ಯಮಾಪನ ಕುಲಸಚಿವ ಪ್ರೊ.ಕೆ.ಜೆ.ಸುರೇಶ್ ಉಪಸ್ಥಿತರಿದ್ದರು.
ಮಂಚೇಗೌಡಗೆ
ಗೌರವ ಡಾಕ್ಟರೇಟ್!: ಬೆಂಗಳೂರು ಡೈರಿ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಎನ್.ಮಂಚೇಗೌಡ ಅವರಿಗೆ ತುಮಕೂರು ವಿವಿ 13ನೇ ಘಟಿಕೋತ್ಸವ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಅನ್ನು ವಿವಿ ಕುಲಾಧಿಪತಿ, ರಾಜ್ಯಪಾಲ ವಿ.ಆರ್.ವಾಲಾ ಪ್ರದಾನ ಮಾಡಿದರು. ನಂದಿನಿ ಬ್ರಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಅನುಷ್ಠಾನಗೊಳಿಸಿದ ರೂವಾರಿ ಎನಿಸಿದ್ದ ಮಂಚೇಗೌಡ, ಮುರ‌್ರಾ ಎಮ್ಮೆ ತಳಿಯನ್ನು ಮೊದಲ ಬಾರಿ ಪಂಜಾಬಿನಿಂದ ತರಿಸಿ ಹಾಲು ಉತ್ಪಾದನೆ ಹೆಚ್ಚಿಸಿದ ಕೀರ್ತಿ ಹೊಂದಿದ್ದಾರೆ.
ಪ್ರಸ್ತುತ 20 ಕೋರ್ಸ್‌ಗಳ ಜತೆಗೆ ಈ ಬಾರಿ 2 ಹೊಸ ಕೋರ್ಸ್‌ಗಳನ್ನು ಸೇರ್ಪಡೆ ಮಾಡಲಾಗಿದೆೆ. ಎಂ.ಕಾಂ., (ಮಾಹಿತಿ ವ್ಯವಸ್ಥೆ) ಹಾಗೂ ಎಂ.ಎಸ್ಸಿ., (ಸೂಕ್ಷ್ಮ ಜೀವಶಾಸ್ತ್ರ) ಕೋರ್ಸ್ ಆರಂಭಿಸಲಾಗುವುದು. ಇದರ ಜತೆಗೆ ವಿವಿಯಲ್ಲಿ ಬೋಧನೆ-ಕಲಿಕೆಯಲ್ಲಿ ನಾವೀನ್ಯತೆಯ ಉತ್ತೇಜನೆಗೆ ಅವಕಾಶ ಮಾಡಿಕೊಡಲಾಗುವುದು.
ಪ್ರೊ.ವೈ.ಎಸ್.ಸಿದ್ದೇಗೌಡ ವಿವಿ ಕುಲಪತಿ
ಬ್ರಿಟೀಷರ ಕಾಲದ ಪದ್ಧತಿಗೆ ಗುಡ್‌ಬೈ!: ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಸಂಪ್ರದಾಯದಂತೆ
ನೀಡುತ್ತಿದ್ದ ಗೌನ್ ಹಾಗೂ ಟೋಪಿಗಳಿಗೆ ಘಟಿಕೋತ್ಸವದಲ್ಲಿ ಗುಡ್‌ಬೈ ಹೇಳಿಲಾಗಿತ್ತು, ಅತಿಥಿ, ಗಣ್ಯರಿಗೆ ಗೌನ್ ಇತ್ತಾದರೂ ಗೌನ್ ನೀಡಲಿಲ್ಲ. ಬ್ರಿಟೀಷರ ಕಾಲದ ಸಂಪ್ರದಾಯಕ್ಕೆ ತಿಲಾಂಜಲಿ ಹೇಳಿದ ತುಮಕುರು ವಿವಿ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳು ಖಾದಿ ಶ್ವೇತವಸ್ತ್ರದಲ್ಲಿ ಕಾಣಿಸಿದ್ದು ವಿಶೇಷವಾಗಿತ್ತು.