

ಚಿತ್ರದುರ್ಗ: ತಂತ್ರಜ್ಞಾನ ಸದ್ಬಳಕೆ ಮಾಡಿಕೊಂಡು ಕೌಶಲ ವೃದ್ಧಿಸಿಕೊಳ್ಳದಿದ್ದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ದೊರಕದು ಎಂದು ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಎಸ್.ಆರ್.ನಿರಂಜನ ಹೇಳಿದರು. ನಗರದ ಸರ್ಕಾರಿ ಕಲಾ ಕಾಲೇಜಿನ ಅಂಬೇಡ್ಕರ್ ಜ್ಞಾನ ಸಭಾಂಗಣದ ಲ್ಲಿ ಮಂಗಳವಾರ ಆಯೋಜಿಸಿದ್ದ ಉನ್ನತ ಶಿಕ್ಷಣದಲ್ಲಿ ಇತ್ತೀಚಿನ ಬೆಳವಣಿಗೆಗಳು ಕುರಿತು ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿದ ಅವರು,ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಮಹತ್ವದ ಗುರಿ ಇರಬೇಕು. ಶಿಸ್ತು ಮತ್ತು ಉತ್ತಮ ವ್ಯಕ್ತಿತ್ವ ಬಹಳ ಮುಖ್ಯ. ಯಶಸ್ಸಿಗೆ ಕೌಶಲ ಆಧಾರಿತ ಶಿಕ್ಷಣ ಮತ್ತು ಬಹುಶಿಸ್ತೀಯ ನೆಲೆಯ ಜ್ಞಾನದ ಅಗತ್ಯವಿದೆ.
ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕ್ಷೇತ್ರದ ಎಲ್ಲ ವಿಷಯಗಳು ಬಹುಮುಖ್ಯ.ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಕೊರತೆ ಏನು ಎಂಬುದನ್ನು ಅರಿಯಬೇಕು. ತಮ್ಮ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಕೊರತೆಯನ್ನು ಜಯಿಸಬೇಕು. ಬದಲಾಗುತ್ತಿರುವ ಜಗತ್ತಿನಲ್ಲಿ ತಂತ್ರಜ್ಞಾನವೂ ಬದಲಾಗುತ್ತಿದೆ. ಸಂಶೋಧನೆಗಳು ಹೆಚ್ಚಾಗಬೇಕಿದೆ. ಕಲಿಕೆಯಲ್ಲೂ ಬದಲಾವಣೆ ಬೇಕಿದೆ. ಆಧುನಿಕ ಭಾರತದಲ್ಲಿ ಆಯ್ಕೆಯಾಗದೆ ಅವಕಾಶವಾಗಿರುವ ಶಿಕ್ಷಣದ ಸದ್ಬಳಕೆಯಿಂದ ಜ್ಞಾನ ಲಭಿಸುತ್ತದೆ. ಹಿಂದೆ ಅಭಿವೃದ್ಧಿ ಹೊಂದಿದ ದೇಶ ಗಳಿಂದ ಶಿಕ್ಷಣ ಪಡೆಯಲು ಭಾರತಕ್ಕೆ ಬರುತ್ತಿದ್ದರು. ನಿರಂತರ ಕಲಿಕೆ ಮೂಲಕ ಪಾಲಕರ ಮತ್ತು ಸಮಾಜದ ಆಶಯ ಸಾಕಾರಗೊಳಿಸ ಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಉನ್ನತ ಶಿಕ್ಷಣ ಸೇರಬಯಸುವ ವಿದ್ಯ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ. ಜೆ.ಕರಿಯಪ್ಪ ಮಾಳಿಗೆ ಆತಂಕ ವ್ಯಕ್ತಪಡಿಸಿದರು. ಕೌಶಲ ಆಧಾರಿತ ಶಿಕ್ಷಣ ಕಲಿತು ಬದುಕನ್ನು ಕಟ್ಟಿಕೊಳ್ಳಬೇಕಿದೆ. ನಮ್ಮಲ್ಲಿರುವ ಅನುಭ ವವನ್ನು ಜ್ಞಾನವನ್ನಾಗಿ ಮಾಡಿಕೊಂಡು ಸವಾಲುಗಳನ್ನು ಸಮರ್ಥವಾಗಿ ಎದುರಿಸ ಬೇಕಿದೆ ಎಂದರು. ಐಕ್ಯೂಎಸಿ ಸಂಚಾಲಕಿ ಪ್ರೊ.ಆರ್. ತಾರಿಣಿ ಶುಭದಾಯಿನಿ, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಬಿ.ಸುರೇಶ, ಕಾಲೇಜು ಅಧ್ಯಾಪಕರ ಸಂಘದ ಕಾರ‌್ಯದರ್ಶಿ ಹನುಮಂತಪ್ಪ, ಪತ್ರಾಂಕಿತ ವ್ಯವಸ್ಥಾಪಕ ಮಾರ್ಟಿನ್ ಸ್ಯಾಮುಯಲ್ ಡಬ್ಲ್ಯೂ ಇದ್ದರು.
(ಸಿಟಿಡಿ 28 ಉಪನ್ಯಾಸ)
ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಉನ್ನತ ಶಿಕ್ಷಣದಲ್ಲಿ ಇತ್ತೀಚಿನ ಬೆಳವಣಿಗೆಗಳು ಕುರಿತ ವಿಶೇಷ ಉಪನ್ಯಾಸ ಕಾರ‌್ಯಕ್ರ ಮವನ್ನು ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಎಸ್.ಆರ್.ನಿರಂಜನ ಉದ್ಘಾಟಿಸಿದರು. ಪ್ರೊ.ಜೆ.ಕರಿಯಪ್ಪ ಮಾಳಿಗೆ,ಪ್ರೊ. ಆರ್.ತಾರಿಣಿ ಶುಭದಾಯಿನಿ,ಪ್ರೊ.ಬಿ.ಸುರೇಶ,ಹನುಮಂತಪ್ಪ, ಮಾರ್ಟಿನ್ ಸ್ಯಾಮುಯಲ್ ಡಬ್ಲ್ಯೂ ಇತರರು ಇದ್ದರು.
----