

ಸಂಡೂರು: ಜಿಂದಾಲ್ ಫೌಂಡೇಷನ್ ಸಿಎಸ್‌ಆರ್ ಯೋಜನೆಯಡಿ ಗ್ರಾಮೀಣ ಭಾಗದ ಯುವಕ-ಯುವತಿಯರಿಗಾಗಿ ತೋರಣಗಲ್‌ನ ಒಪಿಜೆ ಕೇಂದ್ರದಲ್ಲಿ ಹಾಸ್ಪಿಟಾಲಿಟಿ ತರಬೇತಿ ಕಾರ್ಯಕ್ರಮ ಆರಂಭಿಸಿದೆ ಎಂದು ಉದ್ಯಮಿ ಸಂಗೀತಾ ಜಿಂದಾಲ್ ಹೇಳಿದರು.
ಒಪಿಜೆ ಕೇಂದ್ರದಲ್ಲಿ ಆಯೋಜಿಸಿದ್ದ ಹಾಸ್ಪಿಟಾಲಿಟಿ ತರಬೇತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಓದಿರುವ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಮೂರು ತಿಂಗಳು ತರಬೇತಿ ನೀಡಿ ಸ್ಟಾರ್ ಹೋಟೆಲ್‌ಗಳಲ್ಲಿ ಆತಿಥ್ಯ ನಿರ್ವಹಣೆ, ಸಂವಹನ, ಹೋಟೆಲ್ ನಿರ್ವಹಣೆ ಮತ್ತು ಅತಿಥಿಗಳ ನಿರ್ವಹಣೆಯ ಕೌಶಲಗಳನ್ನು ಕಲಿಸಿಕೊಡುವುದರ ಮೂಲಕ ಉದ್ಯೋಗಾವಕಾಶ ಒದಗಿಸಲಾಗುವುದು ಎಂದು ತಿಳಿಸಿದರು.
ಮೂರನೇ ಹಂತದಲ್ಲಿ 23 ಅಭ್ಯರ್ಥಿಗಳು ತರಬೇತಿ ಪೂರ್ಣಗೊಳಿಸಿದ್ದು ತರಬೇತಿ ಪ್ರಮಾಣಪತ್ರ ಮತ್ತು ಉದ್ಯೋಗ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಒಪಿಜೆ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಗ್ರಾಮೀಣ ಭಾಗದ ಯುವಕ, ಯುವತಿಯರು ಕೌಶಲ ತರಬೇತಿ ಪಡೆದು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡುವಾಗ ಮಹಿಳೆಯರು ಎಚ್ಚರದಿಂದ ಇರಬೇಕು. ಸಾಧ್ಯವಾದರೆ ಸ್ವಯಂ ರಕ್ಷಣೆ ತರಬೇತಿಯನ್ನೂ ಪಡೆದುಕೊಳ್ಳಬೇಕು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಬೇಕು. ದೈಹಿಕ ಮತ್ತು ಮಾನಸಿಕವಾಗಿ ಉತ್ತಮ ಆರೋಗ್ಯ ಹೊಂದಬೇಕು. ಬೆಂಗಳೂರು, ಮುಂಬೈ ಮತ್ತು ವಿದೇಶದಲ್ಲಿ ಕೆಲಸ ಮಾಡುವ ಕೌಶಲ ಪಡೆದುಕೊಳ್ಳಬೇಕು. ಪ್ರಸ್ತುತ ತರಬೇತಿ ಪಡೆದವರಲ್ಲಿ ಯಾರಿಗಾದರೂ ವಿದೇಶದಲ್ಲಿ ಕೆಲಸ ಮಾಡಲು ಆಸಕ್ತಿಯಿದ್ದರೆ ಅದಕ್ಕೆ ಜೆಎಸ್‌ಡಬ್ಲುೃ ಕಡೆಯಿಂದ ಅನುಕೂಲ ಮಾಡಿಕೊಡಲಾಗುವುದು ಎಂದು ಸಂಗೀತಾ ಜಿಂದಾಲ್ ತಿಳಿಸಿದರು.
ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಮಾತನಾಡಿ, ಎರಡನೇ ಹಂತದಲ್ಲಿ 23 ಅಭ್ಯರ್ಥಿಗಳು ತರಬೇತಿ ಪಡೆದಿದ್ದು, ಒಂಬತ್ತು ಜನರಿಗೆ ಸ್ಥಳೀಯ ಹೋಟೆಲ್‌ಗಳಾದ ಹಯಾತ್ ಮತ್ತು ಶಿವಲೀಲಾ ಪ್ಯಾಲೇಸ್‌ನಲ್ಲಿ ಕೆಲಸ ದೊರೆತಿದೆ. ಉಳಿದವರಿಗೆ ಸಂದರ್ಶನ ನಡೆಯುತ್ತಿದೆ. ಮೂರನೇ ಬ್ಯಾಚ್‌ನಲ್ಲಿ 100 ಜನರು ಅರ್ಜಿ ಸಲ್ಲಿಸಿದ್ದು, 30 ಅಭ್ಯರ್ಥಿಗಳಿಗೆ ತರಬೇತಿ ಆರಂಭಿಸಲಾಗಿದೆ ಎಂದು ತಿಳಿಸಿದರು.