ಕೌಶಲ ತರಬೇತಿ ಪಡೆದು ಸ್ವಾವಲಂಬಿಗಳಾಗಿ, ಜಿಪಂ ಉಪಾಧ್ಯಕ್ಷೆ ರೂಪಾ ಮರಿಯಪ್ಪ ಕರೆ, ಹೊಲಿಗೆ ಯಂತ್ರ ವಿತರಣೆ

zp
Published on

ಬೆಂಗಳೂರು ಗ್ರಾಮಾಂತರ: ಕೌಶಲ ತರಬೇತಿ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರೂಪಾ ಮರಿಯಪ್ಪ ಹೇಳಿದರು.

ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿ ಹೋಬಳಿಯಲ್ಲಿ ಶುಕ್ರವಾರ ಕ್ಷೇತ್ರದ ಫಲಾನುಭವಿಗಳಿಗೆ ಜಿಪಂ ಅನುದಾನದಲ್ಲಿ ಹೊಲಿಗೆ ಯಂತ್ರ, ದೋಬಿ ಕಿಟ್, ಮರಗೆಲಸದ ಸಲಕರಣೆ ಸೇರಿ ಮತ್ತಿತರ ಪರಿಕರ ವಿತರಿಸಿ ಮಾತನಾಡಿದರು.

ಮಹಿಳೆಯರು ಸೇರಿ ಅನುಗೊಂಡನಹಳ್ಳಿ ಕ್ಷೇತ್ರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಜಿಪಂನಿಂದ ಹೊಲಿಗೆ ಯಂತ್ರ, ದೋಬಿ ಕಿಟ್ ಸೇರಿ ಹಲವು ಉಪಕರಣ ವಿತರಿಸಲಾಗುತ್ತಿದೆ. ಸವಲಭ್ಯ ಸದ್ಬಳಕೆ ಮಾಡಿಕೊಂಡು ಸಬಲರಾಗಬೇಕು ಎಂದು ಕರೆ ನೀಡಿದರು.

ಗ್ರಾಮಾಂತರ ಜಿಪಂನಿಂದ ಅನೇಕ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಅರಿವು ಮೂಡಿಸಬೇಕು. ಅರ್ಹರನ್ನು ಗುರುತಿಸಿ ಸವಲತ್ತು ತಲುಪಿಸಲು ಶ್ರಮಿಸಬೇಕು ಎಂದು ಸೂಚಿಸಿದರು.

ಕರೊನಾ ತಡೆಗೆ ಕರೆ: ಕರೊನಾ ಮಹಾಮಾರಿಯಿಂದ ಇಡೀ ವಿಶ್ವವೇ ನಲುಗಿದೆ, ಕರೊನಾ ನಿಯಂತ್ರಣ ಕೇವಲ ಸರ್ಕಾರ ಅಥವಾ ಇನ್ಯಾರದ್ದೋ ಹೊಣೆಯಲ್ಲ. ಪ್ರತಿ ಸಾರ್ವಜನಿಕರು ಕರೊನಾ ನಿಯಂತ್ರಣಕ್ಕೆ ಹೋರಾಡಬೇಕಿದೆ, ಕರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net