

ಬಸವಕಲ್ಯಾಣ: ಕೌಶಲ ಕುಶಲಕರ್ಮಿಗಳ ಜೀವಾಳವಾಗಿದೆ. ಇದು ಇದ್ದರೆ ನೌಕರಿಗಾಗಿ ಪರಿತಪಿಸುವ ಪ್ರಮೇಯವೇ ಬರುವುದಿಲ್ಲ. ಕೌಶಲ ಬೆಳೆಸಿಕೊಳ್ಳಬೇಕು ಎಂದು ಕಲಬುರಗಿ ವಿಭಾಗೀಯ ಕಚೇರಿ ಸಹಾಯಕ ನಿರ್ದೇಶಕ ಬಸವರಾಜ ಕಣಮಸ ಹೇಳಿದರು.
ಬಸವಕಲ್ಯಾಣ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಪ್ರಧಾನಮಂತ್ರಿ ರಾಷ್ಟಿçÃಯ ಶಿಶಿಕ್ಷು ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ನೌಕರಿ ಎಲ್ಲರಿಗೂ ಬೇಕು, ಈ ನಿಟ್ಟಿನಲ್ಲಿ ಇಲಾಖೆ ಪ್ರತಿ ತಿಂಗಳ ಎರಡನೇ ಸೋಮವಾರ ಶಿಶಿಕ್ಷು ಮೇಳ/ಉದ್ಯೋಗ ಮೇಳ ಆಯೋಜಿಸುತ್ತಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ತರಬೇತಿ ಅಧಿಕಾರಿ ದಿಗ್ವಿಜಯಸಿಂಗ್ ಮೀನಾ ಮಾತನಾಡಿ, ಜಿಲ್ಲೆಯಲ್ಲಿ ಶಿಶಿಕ್ಷು ಮೇಳ ಆಯೋಜನೆಯಿಂದ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ. ಐಟಿಐ ಮಕ್ಕಳು ತಮ್ಮ ಪರಿಪೂರ್ಣ ಕೌಶಲದ ಅಭಿವೃದ್ಧಿಗೆ ಕಡ್ಡಾಯವಾಗಿ ಅಪ್ರೆಂಟಿಶಿಪ್ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಪ್ರಲ್ಹಾದ್ ನಾಡಗೌಡ ಮಾತನಾಡಿ, ಐಟಿಐ ಪಾಸಾದ ಮಕ್ಕಳ ಹಿತದೃಷ್ಟಿಯಿಂದ ಹತ್ತು ಕಂಪನಿಗಳನ್ನು ಕರೆಯಿಸಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ೨೭೮ ವಿವಿಧ ವೃತ್ತಿಯ ತರಬೇತಿದಾರರು ಹಾಜರಾಗಿದ್ದು, ೧೪೬ ಜನ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಕಸಾಪ ಜಿಲ್ಲಾ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಮಾತನಾಡಿ, ಉದ್ಯೋಗಕ್ಕೆ ಕೊರತೆಯಿಲ್ಲ ಆದರೆ ಪ್ರಾಯೋಗಿಕ ಪರೀಣಿತಿಯ ಕೊರತೆಯಿದೆ. ಕಾಟಾಚಾರಕ್ಕೆ ಓದದೇ ಕರಗತ ಮಾಡಿಕೊಳ್ಳಲು ಓದಿದರೆ ಭವಿಷ್ಯ ತಮ್ಮ ಕೈಯಲ್ಲಿದೆ. ಐಟಿಐ ಕಡಿಮೆ ಅವಧಿಯ ಖರ್ಚಿಲ್ಲದ ಶಿಕ್ಷಣ. ಅಗ್ರ ಅಂಕಗಳಿಗೆ ಬೆಲೆಯಿಲ್ಲ. ಪ್ರಾಯೋಗಿಕ ಜ್ಞಾನ ಸರಿಯಾಗಿದ್ದರೆ ನೌಕರಿ ಮನೆ ಬಾಗಿಲಿಗೆ ಬರುತ್ತದೆ ಎಂದರು.
ಕಮಲನಗರ ಐಟಿಐ ಪ್ರಾಚಾರ್ಯ ಬಾಬು ರಾಜೋಳಕರ್, ಹುಮನಾಬಾದ್ ಐಟಿಐ ಪ್ರಾಚಾರ್ಯ ನಾಗಭೂಷಣ ಮಠ ಉಪಸ್ಥಿತರಿದ್ದರು. ರಮೇಶ ಹಾದಿಮನಿ ಸ್ವಾಗತಿಸಿದರು. ಮೊಹ್ಮದ್ ಆಸಿಫುಲ್ಲಾ ವಂದಿಸಿದರು. ರಾಜಕುಮಾರ ಕುಂಬಾರ ನಿರೂಪಣೆ ಮಾಡಿದರು.