

ಮದ್ದೂರು: ತಾಲೂಕಿನ ಕೌಡ್ಲೆ ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸಿ.ಪ್ರೇಮಕುಮಾರ್, ಉಪಾಧ್ಯಕ್ಷೆಯಾಗಿ ಇಂದ್ರಮ್ಮ ಅವಿರೋಧವಾಗಿ ಆಯ್ಕೆಯಾದರು.
ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಚುನಾವಣಾ ಪ್ರಕ್ರಿಯೆ ನಿಗದಿಯಾಗಿತ್ತು. ಸಿ.ಪ್ರೇಮಕುಮಾರ್, ಇಂದ್ರಮ್ಮ ಹೊರತು ಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಎಲ್.ಸಂದೀಪ್ ಆವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಸಿ.ಪ್ರೇಮಕುಮಾರ್ ಮಾತನಾಡಿ, ಉಳಿದಿರುವ 30 ತಿಂಗಳ ಅವಧಿಯಲ್ಲಿ ಕೌಡ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿಮಾನಿಗಳು, ಕಾರ್ಯಕರ್ತರು ಅಭಿನಂದಿಸಿದರು. ಮುಖಂಡರಾದ ಸಿ.ಕೃಷ್ಣೇಗೌಡ(ನಿವೃತ್ತ ಜಿಲ್ಲಾಧಿಕಾರಿ), ಕೆ.ರಮೇಶ್, ನಾರಾಯಣ್, ಪುಟ್ಟರಾಜು, ಭದ್ರೇಗೌಡ, ಚಂದ್ರಶೇಖರಯ್ಯ, ರಾಜಣ್ಣ, ನವೀನ್, ರಾಕೇಶ್, ಅಭಿ, ಹೇಮಾ ಪ್ರೇಮ್‌ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.