ಕೌಠಾ ಸೇತುವೆ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಿ

Bidar MP
Published on

ಬೀದರ್: ಔರಾದ್ ತಾಲೂಕಿನ ಕೌಠಾ ಹತ್ತಿರದ ಸೇತುವೆ ಕಾಮಗಾರಿ ಗುಣಮಟ್ಟದಿಂದ ಮಾಡಬೇಕು ಎಂದು ಸಂಸದ ಭಗವಂತ ಖೂಬಾ ಹೇಳಿದರು.

ಜಿಲ್ಲೆ ರಸ್ತೆಗಳ ಅಭಿವೃದ್ಧಿ ಕುರಿತು ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿಗಳ ಕಾರ್ಯನಿರ್ವಾಹಕ ಅಧಿಕಾರಿ ಪಿ. ನಾಗಪ್ಪ ಜತೆ ಚರ್ಚಿಸಿದ ಅವರು, 1.33 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಗುಣಮಟ್ಟದಿಂದ ಕೆಲಸ ಮಾಡಿದರೆ ಮಾತ್ರ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುವೆ. ಸಂಬಂಧಪಟ್ಟ ಗುತ್ತಿಗೆದಾರರಿಗೆ ಉತ್ತಮ ಕೆಲಸ ಮಾಡುವ ಕುರಿತು ಖಡಕ್ ಎಚ್ಚರಿಕೆ ನೀಡಲು ಸೂಚಿಸಿದರು.

ಔರಾದ್-ಬೀದರ್ ರಸ್ತೆಯ ವಿವಿಧೆಡೆ ತಗ್ಗು ಗುಂಡಿಗಳು ಮುಚ್ಚಲು ಹಾಗೂ ಕೆಲವೊಂದು ಕಡೆ ರಸ್ತೆ ಅಭಿವೃದ್ಧಿಗಾಗಿ ರೂ. 74 ಲಕ್ಷ ಸರ್ಕಾರ ಬಿಡುಗಡೆ ಮಾಡಿದೆ. ಈ ಕಾಮಗಾರಿ ಸಹ ಸರಿಯಾಗಿ ಆಗಬೇಕು. ಇಲಾಖೆ ಒಬ್ಬ ಅಭಿಯಂತರರನ್ನ ನೇಮಿಸಿ ಕಾಮಗಾರಿಯು ಸರಿಯಾಗಿ ಆಗುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿಗೆ ತೊಡಕಾಗಿದ್ದ ನ್ಯಾಯಾಲಯದ ತಡೆಯಾಜ್ಞೆ ವಿಚಾರಣೆ ಮುಗಿದಿದೆ. ವಾರದೊಳಗೆ ಈ ಆದೇಶ ಬರಲಿದೆ. ಆದೇಶ ಬಂದ ತಕ್ಷಣ ಹೆದ್ದಾರಿ ಕಾಮಗಾರಿ ಆರಂಭದ ಉಳಿದ ಪ್ರಕ್ರಿಯೆಗಳು ಮಾಡಿಕೊಳ್ಳಬೇಕು ಎಂದರು.

ಬೀದರ್-ಕಮಲನಗರ ಹೆದ್ದಾರಿಯಲ್ಲಿ ಇನ್ನೂ 9.6 ಕಿಮೀ ಬಾಕಿ ಉಳಿದಿದೆ. ಕೆಲವೊಂದು ಕಡೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವ ಸಂಬಂಧ ಪತ್ರ ವ್ಯವಹಾರ ಮಾಡಲಾಗಿದೆ. ಈ ರಸ್ತೆ ಸಹ ಬರುವ ಕೆಲ ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಸಂಸದರಿಗೆ ಭರವಸೆ ನೀಡಿದರು.

ಬಸವ ಭವನಕ್ಕೆ ಜಾಗ: ಬೀದರ್ ನಗರದ ಹೊರವಲಯದ ಚಿಕ್ಕಪೇಟ್ ಹತ್ತಿರದ ಸರ್ವೆ ನಂ. 60ರಲ್ಲಿ 1.20 ಎಕರೆ ಜಮೀನು ಬಸವ ಭವನಕ್ಕೆ ಹಾಗೂ ಸರ್ವೆ ನಂ.61ರಲ್ಲಿ 1 ಎಕರೆ ಜಮೀನನ್ನು ಡಾ.ಜಗಜೀವನರಾಂ ಭವನ ನಿರ್ಮಾಣಕ್ಕಾಗಿ ಕಾಯ್ದಿರಿಸಲಾಗಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ. ಎರಡೂ ಭವನಕ್ಕೆ ಜಾಗ ಕಾಯ್ದಿರಿಸಿದ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ ಎಂದು ಸಂಸದರು ಪ್ರತ್ಯೇಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

367.44 ಕೋಟಿ ರೂ. ಅನುದಾನದ ಬೀದರ್-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮರು ಟೆಂಡರ್ ಆಗಿದ್ದು, ಶೀಘ್ರ ಕೆಲಸ ಆರಂಭವಾಗಲಿದೆ. ಜಿಲ್ಲೆಯ ವಿವಿಧ ರಸ್ತೆ ಅಭಿವೃದ್ಧಿಗೆ ನಿರಂತರ ಪ್ರಯತ್ನ ಮಾಡುತ್ತಿರುವೆ. ಕ್ಷೇತ್ರದ ರಸ್ತೆಗಳು ಅಭಿವೃದ್ಧಿಗೆ ಪೂರಕವಾಗಲಿವೆ.| ಭಗವಂತ ಖೂಬಾ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net