

ಮೈಸೂರು: ಮೈಸೂರು ತಾಲೂಕಿನ ಜಟ್ಟಿಹುಂಡಿ ಗ್ರಾಮದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಮೈಸೂರು ತಾಲೂಕಿನ ಗೋಪಾಲಪುರದ ನಿವಾಸಿ ದೇವರಾಜು ಎಂಬಾತನೇ ತನ್ನ ಪತ್ನಿ ಸವಿತಾ(35) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಸವಿತಾ ಹಾಗೂ ದೇವರಾಜ್ 2010ರಲ್ಲಿ ಮದುವೆ ಆಗಿದ್ದರು. ದಂಪತಿಗೆ ಪುತ್ರಿ ಇದ್ದಾಳೆ. ಕೆಲವು ತಿಂಗಳಿಂದ ಪತಿ- ಪತ್ನಿ ನಡುವೆ ಭಿನ್ನಾಬಿಪ್ರಾಯ ಶುರುವಾಗಿತ್ತು.
ಇದರಿಂದ ಮನನೊಂದಿದ್ದ ಸವಿತಾ ಗಂಡನಿಂದ ದೂರಾಗಿ, ಜೀವನೋಪಾಯಕ್ಕಾಗಿ ಜಟ್ಟಿಹುಂಡಿ ಬಳಿಯ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದರು. 4 ತಿಂಗಳಿಂದ ನಿತ್ಯ ಮನೆಗೆ ಹಿಂದಿರುಗುವಂತೆ ದೇವರಾಜ್ ಒತ್ತಡ ಹೇರುತ್ತಿದ್ದ. ಪತಿಯೊಂದಿಗೆ ತೆರಳಲು ಸವಿತಾ ನಿರಾಕರಿಸಿದ್ದರು.
ವೃದ್ಧಾಶ್ರಮಕ್ಕೆ ಗುರುವಾರ ಬೆಳಗ್ಗೆ ಬಂದ ದೇವರಾಜ್, ಪತ್ನಿಯನ್ನು ಮನೆಗೆ ಬರುವಂತೆ ಪೀಡಿಸಿದ್ದಾನೆ. ಆದರೆ ಸವಿತಾ ಒಪ್ಪಿಲ್ಲ. ಇದರಿಂದ ಕುಪಿತನಾದ ದೇವರಾಜ್, ಚಾಕುವಿನಿಂದ ಹೊಟ್ಟೆಗೆ ಇರಿದು ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸವಿತಾ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಇಲವಾಲ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.