ಚಾಮರಾಜನಗರ: ಗಂಡನ ಕುಡಿತ ಮತ್ತು ಕೌಟುಂಬಿಕ ಕಲಹದ ಕಾರಣದಿಂದ ಬೇಸತ್ತಿದ್ದ ತಾಯಿಯೊಬ್ಬಳು, ತನ್ನ ಕರುಳ ಕುಡಿಯೊಂದಿಗೆ ಶನಿವಾರ ನೀರು ಪಾಲಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ತಾಲೂಕಿನ ಹೊನ್ನಹಳ್ಳಿ ಗ್ರಾಮದ ಶಿವಮ್ಮ (58) ತನ್ನ ಮಗನಾದ ಹರೀಶ್(5) ಮೃತ ದುರ್ದೈವಿಗಳು. ಅದೇ ಗ್ರಾಮದ ನಿವಾಸಿ ಮಂಜು ಎಂಬುವವರ ಜತೆಗೆ ಕೆಲವುಗಳ ಹಿಂದೆ ಮದುವೆಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು. ಆದರೇ ಇತ್ತೀಚಿನ ವರ್ಷಗಳಲ್ಲಿ ಗಂಡ ಮತ್ತು ಹೆಂಡತಿ ಇಬ್ಬರು ಮದ್ಯಸೇವನೆ ಮಾಡುತ್ತಿದ್ದ ಪರಿಣಾಮ ಕುಟುಂಬದಲ್ಲಿ ಹಲವಾರು ಬಾರಿ ಸಣ್ಣಪುಟ್ಟ ಜಗಳಗಳು ನಡೆಯುತ್ತಿತ್ತು. ಈ ವೇಳೆ ಸಾಕಷ್ಟು ಬಾರಿ ಶಿವಮ್ಮ ಜಗಳವಾಡಿಕೊಂಡು ತವರು ಮನೆಗೆ ಹೋಗಿದ್ದಳು. ಶನಿವಾರ ಬೆಳಗ್ಗೆ ಶಿವಮ್ಮ ಮಗನೊಂದಿಗೆ ಮನೆಯಿಂದ ಹೊರಟು ಹೋಗಿದ್ದಾಳೆ. ಈ ವೇಳೆ ಮನೆಯವರು ಹಿಂದಿನಂತೆ ತವರು ಮನೆಗೆ ಹೋಗಿರಬೇಕು ಎಂದು ಭಾವಿಸಿದ್ದಾರೆ. ಆದರೇ ಶಿವಮ್ಮ ತನ್ನ ಮಗನೊಂದಿಗೆ ಯಾನಗಳ್ಳಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಕೆರೆಯಲ್ಲಿ ತೇಲುತ್ತಿದ್ದ ತಾಯಿ-ಮಗನ ಶವ:
ತಾಲೂಕಿನ ಯಾನಗಳ್ಳಿ ಗ್ರಾಮದ ಬಳಿ ಇರುವ ಮೇಲೋರು ಕೆರೆಯಲ್ಲಿ ಶಿವಮ್ಮ ಮತ್ತು ಹರೀಶ್ ಮೃತದೇಹ ಜತೆಯಲ್ಲಿ ತೇಲುತ್ತಿತ್ತು. ಈ ದೃಶ್ಯವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪರಿಶೀಲನೆ ನಡೆಸಿ, ಶವಗಳನ್ನು ಚಾಮರಾಜನಗರ ವೈದ್ಯಕೀಯ ಆಸ್ಪತ್ರೆಗೆ ಶವಪರೀಕ್ಷೆಗಾಗಿ ರವಾನಿಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.