ಕೋವಿಡ್‌ಗೆ ಕುಟುಂಬದ ಮೂವರು ಬಲಿ

2525
Published on

ಹುಕ್ಕೇರಿ: ತಾಲೂಕಿನ ಎಲಿಮುನ್ನೋಳಿ ಗ್ರಾಮದ ಒಂದೇ ಕುಟುಂಬದ ತಾಯಿ ಮತ್ತು ಇಬ್ಬರು ಮಕ್ಕಳು ನಿಧನರಾಗಿದ್ದಾರೆ. ಕುಟುಂಬದ ಯಜಮಾನನೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದ ವಕೀಲರ ಸಂಘದ ಮಾಜಿ ಅಧ್ಯಕ್ಷ, ವಕೀಲ ಎಸ್.ಎಸ್.ಮಾಳಾಜ (45), ತಾಯಿ ಇಂದುಮತಿ ಮಾಳಾಜ (69) ಮತ್ತು ಹಿರಿಯ ಸೋದರ ಮಹೇಶ ಮಾಳಾಜ ಅವರು ವಾರದಲ್ಲಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಅಲ್ಲದೆ, ಮನೆಯ ಯಜಮಾನ ಶಂಕರ ಮಾಳಾಜ ಅವರು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಹಕಾರಿ ಧುರೀಣ ವಿಜಯ ರವದಿ ಅವರ ಅಳಿಯಂದಿರು ಮತ್ತು ವಕೀಲ ಎಸ್.ಎಸ್.ಮಾಳಾಜ ಅವರ ನಿಧನ ಹಾಗೂ ಕುಟುಂಬ ಸದಸ್ಯರ ಮರಣದಿಂದಾಗಿ ಎಲಿಮುನ್ನೋಳಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಅವರ ನಿಧನಕ್ಕೆ ಮಾಜಿ ಸಚಿವ ಎ.ಬಿ.ಪಾಟೀಲ, ತಾಲೂಕಿನ ವಕೀಲರ ಸಂಘ, ಕಾಂಗ್ರೆಸ್ ಧುರೀಣರು, ವಿವಿಧ ಸಂಘ ಸಂಸ್ಥೆಗಳ ಜನಪ್ರತಿನಿಧಿಗಳು ಕಂಬನಿ ಮಿಡಿದಿದ್ದಾರೆ.

ವಕೀಲರ ಸಂಘದ ಮಾಜಿ ಅಧ್ಯಕ್ಷರ ಕುಟುಂಬದಲ್ಲಿ ಆಗಿರುವ ಈ ಘಟನೆ ತೀವ್ರ ಆಘಾತ ಮೂಡಿಸಿದೆ. ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net