ಕೋವಿಡ್‌ನಿಂದಾಗಿ ಅಭಿವೃದ್ಧಿಗೆ ಹಿನ್ನಡೆ

23 mlv 1
ಶಾಸಕ ಅನ್ನದಾನಿ ಬೇಸರ ಅಭಿವೃದ್ಧಿ ಕಾಮಗಾರಿಗೆ ಚಾಲನೆ
Published on

ಮಳವಳ್ಳಿ: ನನ್ನ ಅಧಿಕಾರದ ಅರ್ಧದಷ್ಟು ಅವಧಿಯನ್ನು ಕೋವಿಡ್ ಮಹಾಮಾರಿ ನುಂಗಿ ಹಾಕಿದ್ದು ಹಾಗೂ ಇಂದೆಂದೂ ಕಂಡರಿಯದಂತ ವರುಣಾರ್ಭಟದಿಂದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ ಎಂದು ಶಾಸಕ ಡಾ.ಕೆ.ಅನ್ನದಾನಿ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಉಪ್ಪನಹಳ್ಳಿ (ಕನ್ನಹಳ್ಳಿ) ಗ್ರಾಮದಲ್ಲಿ ಬುಧವಾರ ಶಾಸಕರ ವಿಶೇಷ ಅನುದಾನದಡಿ 20 ಲಕ್ಷ ರೂ. ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕ್ಷೇತ್ರದ ಮತದಾರರು ನೀಡಿರುವ ಆಶೀರ್ವಾದದ ಋಣ ನನ್ನ ಮೇಲಿದೆ. ಜನಸಾಮಾನ್ಯರೊಡನೆ ಇದ್ದು ಅವರ ಕಷ್ಟಸುಖಗಳಲ್ಲಿ ಭಾಗಿಯಾಗಿದ್ದೇನೆ. ತಾಲೂಕಿನಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂಬ ಹಂಬಲವಿತ್ತು. ಆದರೆ ಸರ್ಕಾರಕ್ಕೆ ಸಂಪನ್ಮೂಲದ ಕೊರತೆಯಾದ ಪರಿಣಾಮ ನಿರೀಕ್ಷೆ ಪ್ರಮಾಣದಲ್ಲಿ ಅನುದಾನ ಬಿಡುಗಡೆಯಾಗಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಸದ್ಯ ಎಲ್ಲ ಸಮಸ್ಯೆಗಳಿಂದ ಸರ್ಕಾರ ಚೇತರಿಕೊಂಡು ಅನುದಾನ ನೀಡುತ್ತಿದ್ದು, ಉಳಿದ ಅವಧಿಯಲ್ಲಿ ಸಾಧ್ಯವಾದಷ್ಟು ಆದ್ಯತೆಗೆ ಅನುಗುಣವಾಗಿ ಉತ್ತಮ ಕೆಲಸಗಳನ್ನು ಮಾಡುತ್ತೇನೆ. ಐದು ವರ್ಷ ಶಾಸಕನಾಗಿ ಕ್ಷೇತ್ರದಲ್ಲಿ ಯಾವುದೇ ಕೆಲಸಗಳನ್ನು ಮಾಡಿಲ್ಲವೆಂದು ರಾಜಕೀಯ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮೂಗಿನ ಕೊಪ್ಪಲು, ಸಂಶೆಟ್ಟಿಪರ, ಪೂರಿಗಾಲಿ, ಬಳ್ಳಗೆರೆ, ಪಂಡಿತಹಳ್ಳಿ, ತಮ್ಮಡಹಳ್ಳಿ, ಬುಗತಗಹಳ್ಳಿ, ದುಗ್ಗನಹಳ್ಳಿ ಗ್ರಾಮಗಳಲ್ಲಿ ಒಟ್ಟು 170 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಪುರಸಭೆ ಉಪಾಧ್ಯಕ್ಷ ಪ್ರಶಾಂತ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಮಲ್ಲಪ್ಪ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಪುಟ್ಟುಬುದ್ದಿ, ಜ್ಯೋತಿಷಿ ಮಹೇಶ್ ಆರಾಧ್ಯ, ಮುಖಂಡರಾದ ಬೂಹಳ್ಳಿ ಸದಾ, ಬುಲೇಟ್ ನಂಜುಂಡಪ್ಪ ಇತರರು ಇದ್ದರು.

ಮಳವಳ್ಳಿ ತಾಲೂಕಿನ ಉಪ್ಪನಹಳ್ಳಿ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಕೆ.ಅನ್ನದಾನಿ ಭೂಮಿಪೂಜೆ ನೆರವೇರಿಸಿದರು. ಪ್ರಶಾಂತ್, ಶಿವಮಲ್ಲಪ್ಪ, ಪುಟ್ಟುಬುದ್ದಿ, ಜ್ಯೋತಿಷಿ ಮಹೇಶ್ ಆರಾಧ್ಯ, ಬೂಹಳ್ಳಿ ಸದಾ, ಬುಲೇಟ್ ನಂಜುಂಡಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net