

ಬೇಲೂರು: ಮಹಾಮಾರಿ ಕೋವಿಡ್ ಸಂದರ್ಭ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುವ ಮೂಲಕ ವೈದ್ಯರು ಕೋಟ್ಯಂತರ ಜನರ ಆರಾಧ್ಯ ದೈವವಾಗಿ ಆರೋಗ್ಯಯುತ ಸಮಾಜಕ್ಕೆ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ತಹಸೀಲ್ದಾರ್ ಎಂ.ಮಮತಾ ಹೇಳಿದರು.
ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮತ್ತು ಕವಿ ಕಾವ್ಯಸುಧೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೈದ್ಯರ ಸೇವೆ ಅತ್ಯಂತ ಮಹತ್ತರವಾದ ಸೇವೆಯಾಗಿದೆ. ವೈದ್ಯರು ನಗುಮುಖದಿಂದ ರೋಗಿಗಳನ್ನು ಕಾಣಬೇಕು. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೃತ್ತಿ ವ್ಯಾಪಾರೀಕರಣವಾಗುತ್ತಿದೆ. ಇದರ ನಡುವೆಯೂ ಇಂದಿಗೂ ಮಾದರಿಯಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರಿದ್ದಾರೆ. ಇಂತಹ ವೈದ್ಯರನ್ನು ಗುರುತಿಸಿ ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಅಧ್ಯಕ್ಷ, ಸಾಹಿತಿ ಸೋಂಪುರ ಪ್ರಕಾಶ್ ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯೂ ಎಲೆಮರೆ ಕಾಯಿಯಂತಿರುವ ಸಾಹಿತಿಗಳನ್ನು, ಪ್ರತಿಭಾವಂತರನ್ನು ಗುರುತಿಸಿ ಸೂಕ್ತ ವೇದಿಕೆ ನೀಡುತ್ತಿದೆ. ಜತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಯುವ ಸಾಹಿತಿಗಳು ಬರೆದ ಪುಸ್ತಕಗಳನ್ನು ಪ್ರಕಾಶನದ ಮೂಲಕ ಹೊರ ತರುತ್ತಿರುವ ಹೆಗ್ಗಳಿಕೆಗೆ ಸಾಹಿತ್ಯ ವೇದಿಕೆ ಪಾತ್ರವಾಗಿದೆ. ಕವಿಗೋಷ್ಠಿ ಮತ್ತು ಸಾಹಿತ್ಯಪರ ಚಟುವಟಿಕೆಗಳನ್ನು ಸದಾ ಪ್ರೋತ್ಸಾಹಿಸುವುದರೊಂದಿಗೆ ಜನಪರ, ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಪಟ್ಟಣದ ಡಾ.ಚಂದ್ರಮೌಳಿ, ಡಾ.ಸಂತೋಷ ಮತ್ತು ಡಾ.ನಾರಾಯಣಸ್ವಾಮಿ ಅವರನ್ನು ಸನ್ಮಾನಿಸುತ್ತಿದ್ದೇವೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಲ್.ರಾಜೇಗೌಡ, ಮಾಜಿ ಅಧ್ಯಕ್ಷ ಮಾ.ಶಿವಮೂರ್ತಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಚಂದ್ರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾರುತಿ, ಕಾರ್ಯದರ್ಶಿ ಎ.ಸಿ.ನಿರಂಜನ್, ಶಿಕ್ಷಕಿ ಮಧು ಮಾಲತಿ ಇತರರಿದ್ದರು.