ಕೋವಿಡ್ ಸೋಂಕು ಎದುರಿಸಲು ಜಿಲ್ಲೆ ಸನ್ನದ್ಧ-ಶಿವಾನಂದ ಕಾಪಶಿ

dc1.jpg
Published on

ದಾವಣಗೆರೆ: ಚೀನಾ ಹಾಗೂ ಇತರೆಡೆಬಿಎಫ್-7 ರೂಪಾಂತರ ತಳಿಯ ಕೋವಿಡ್ ಸೋಂಕು ಹಬ್ಬುತ್ತಿದ್ದು, ಇದನ್ನು ಎದುರಿಸಲು ಜಿಲ್ಲೆಯಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ಮಂಗಳವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಸರ್ಕಾರದ ಸೂಚನೆಯಂತೆ ಮಧ್ಯಾಹ್ನ ಡ್ರೈ ರನ್ (ಕಲ್ಪಿತ ಕಾರ್ಯಾಚರಣೆ) ನಡೆಸಲಾಗಿದ್ದು, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 927 ಆಕ್ಸಿಜನ್ ಬೆಡ್, 139 ಐಸಿಯು ಬೆಡ್, 54 ವೆಂಟಿಲೇಟರ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1088 ಬೆಡ್, 660 ಜನರಲ್ ಬೆಡ್, 25 ವೆಂಟಿಲೇಟರ್‌ಗಳು ಸುಸ್ಥಿತಿಯಲ್ಲಿವೆ ಎಂದರು.

ಜಿಲ್ಲಾಸ್ಪತ್ರೆ ಆವರಣ ಹಾಗೂ ವಿವಿಧ ತಾಲೂಕು ಆಸ್ಪತ್ರೆ, ಇಎಸ್‌ಐ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕಗಳು, ಸರ್ಕಾರಿ ಆಸ್ಪತ್ರೆಗಳ ವ್ಯಾಪ್ತಿಯ 407 ಜಂಬೋ ಸಿಲಿಂಡರ್, 309 ಸಣ್ಣ ಸಿಲಿಂಡರ್, 5 ಲೀ. ಸಾಮರ್ಥ್ಯದ 158, 10 ಲೀ ಸಾಮರ್ಥ್ಯದ 213 ಆಮ್ಲಜನಕ ಸಾಂದ್ರಕ, 36 ಆಂಬುಲೆನ್ಸ್‌ಗಳಿವೆ. ಬಾಪೂಜಿ ಹಾಗೂ ಎಸ್ಸೆಸ್ ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್ ಘಟಕಗಳಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 716 ಸಿಲಿಂಡರ್‌ಗಳ ಲಭ್ಯತೆ ಇದೆ ಎಂದು ವಿವರಿಸಿದರು.

*ಶೇ.50ರ ಬೂಸ್ಟರ್ ಗುರಿ

ಜಿಲ್ಲೆಯಲ್ಲಿ ಇದುವರೆಗೆ 5 ಲಕ್ಷ ಜನರು ಬೂಸ್ಟರ್ ಡೋಸ್ ಪಡೆದಿದ್ದಾರೆ. ಇನ್ನೂ 6,05,375 ಜನರಿಗೆ ಬೂಸ್ಟರ್ ಡೋಸ್ ನೀಡುವುದು ಬಾಕಿ ಇದೆ. ಜನವರಿ ಅಂತ್ಯದೊಳಗೆ ಈ ಡೋಸ್ ನೀಡಿಕೆ ಪ್ರಮಾಣವನ್ನು ಶೇ.50ರಷ್ಟು ತಲುಪುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಕೇಸ್ ಪತ್ತೆಯಾಗಿಲ್ಲ. ಕಳೆದ ಕೋವಿಡ್ ಅಲೆಗಳಲ್ಲಿ ರೋಗಿಗಳಿಂದ ಹೆಚ್ಚುವರಿ ಹಣ ಪಡೆದಿದ್ದ ಖಾಸಗಿ ಆಸ್ಪತ್ರೆಗಳಿಂದ ಹಣ ಮರಳಿಸಿಕೊಡಲಾಗಿದೆ. ರೆಮ್‌ಡೆಸಿವರ್ ಔಷಧ ಬಳಸಬೇಕೆ ಬೇಡವೆ ಎಂಬುದಿನ್ನೂ ಜಿಜ್ಞಾಸೆಯಲ್ಲಿದೆ ಎಂದರು.

ಹೊಸ ವರ್ಷಾಚರಣೆಗೆ ಸೂಚನೆ

ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕರು ರಾತ್ರಿ ಒಂದು ಗಂಟೆಯವರೆಗೆ ಹೊಸ ವರ್ಷಾಚರಣೆ ನಡೆಸಲು ಮಾತ್ರ ಅವಕಾಶವಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ತಿಳಿಸಿದರು.

ರಸ್ತೆಗಳನ್ನು ಬಂದ್ ಮಾಡಿ ವರ್ಷಾಚರಣೆ ಮಾಡಲು ಅವಕಾಶವಿಲ್ಲ. ಸ್ವಂತ, ನಿಗದಿತ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಆಚರಿಸಬಹುದು. ಯಾರೂ ಸಹ ಹೊರಾಂಗಣದಲ್ಲಿ ಗುಂಪುಗೂಡುವುದು, ಕುಡಿದು ಗಲಾಟೆ ಮಾಡುವುದು ಹಾಗೂ ತ್ರಿಬಲ್ ರೈಡಿಂಗ್ ಮಾಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾತ್ರಿ ಬೀಟ್ ಹೆಚ್ಚಿಸಲಾಗುತ್ತಿದೆ. ಗೃಹರಕ್ಷಕ ದಳದ ಸಿಬ್ಬಂದಿ ಸೇವೆಯನ್ನೂ ಬಳಸಿಕೊಳ್ಳಲಾಗುತ್ತಿದೆ. ಹೋಟೆಲ್‌ಗಳಲ್ಲಿ ಲಭ್ಯ ಸೀಟುಗಳಿಗೆ ತಕ್ಕಂತೆ ಗ್ರಾಹಕರಿರಬೇಕು. ಚಿತ್ರಮಂದಿರಗಳಲ್ಲಿ ವೀಕ್ಷಕರು ಕಡ್ಡಾಯವಾಗಿ ಎನ್-95 ಮಾಸ್ಕ್ ಧರಿಸಬೇಕು ಎಂದರು.

ಪಾರ್ಟಿ ಆಚರಿಸುವ ಕಡೆಗಳಲ್ಲಿ ನೋ ಮಾಸ್ಕ್ ನೋ ಎಂಟ್ರಿ ಚೀಟಿ ಅಂಟಿಸಬೇಕು. ಥರ್ಮಲ್ ಸ್ಕಾೃನಿಂಗ್, ಉಷ್ಣಾಂಶ ಪರೀಕ್ಷಕ ಯಂತ್ರ ಹೊಂದಿರಬೇಕು. ವೃದ್ದರು ಇಂತಹ ಕಡೆಗಳಲ್ಲಿ ಭಾಗವಹಿಸಬಾರದು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಹಾಗೂ ಮದುವೆಗಳಲ್ಲಿ ಜನಸಂಖ್ಯೆ ಮಿತಿ ಕುರಿತಂತೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಡಿಸಿ ತಿಳಿಸಿದರು.

ಜಿಪಂ ಸಿಇಒ ಡಾ. ಚನ್ನಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್, ಡಾ.ನಟರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net