ಕೋವಿಡ್ ನಿರ್ವಹಣೆ ಮತ್ತಷ್ಟು ಚುರುಕು, ಸಚಿವ ಎಂಟಿಬಿ ನಾಗರಾಜ್ ಮಾಹಿತಿ ಅಭಿಮಾನಿಗಳಿಂದ ಸನ್ಮಾನ ಸ್ವೀಕಾರ

mtb
Published on

ಬೆಂಗಳೂರು ಗ್ರಾಮಾಂತರ: ಸರ್ಕಾರ ವಹಿಸಿರುವ ಕೋವಿಡ್ ನಿರ್ವಹಣೆ ಹಾಗೂ ಪ್ರಕೃತಿ ವಿಕೋಪ ಪರಿಹಾರ ಸಂಬಂಧ ಜಿಲ್ಲಾಡಳಿತ ಭವನದಲ್ಲಿ ಶೀಘ್ರ ವಿಶೇಷ ಸಭೆ ಕರೆಯಲಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಕೈಗೊಳ್ಳಬೇಕಾದ ಕ್ರಮ ಜಾರಿಗೊಳಿಸಲಾಗುವುದು ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಗರುಡಾಚಾರ್ ಪಾಳ್ಯದ ಸ್ವಗೃಹದಲ್ಲಿ ಗುರುವಾರ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕರೊನಾ ಮೊದಲ ಅಲೆ ವೇಳೆಯಿಂದಲೂ ಕ್ಷೇತ್ರದಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿತ್ತು. ನೂತನ ಸಚಿವ ಸಂಪುಟದಲ್ಲಿ ಸಚಿವರಿಗೆ ಜಿಲ್ಲೆಯ ಕೋವಿಡ್ ನಿರ್ವಹಣೆ ಹಾಗೂ ಪ್ರಕೃತಿ ವಿಕೋಪ ಪರಿಹಾರದ ಜವಾಬ್ದಾರಿ ನೀಡಲಾಗಿದೆ. ಅದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾರ್ಯೋನ್ಮುಖರಾಗುತ್ತಿದ್ದೇವೆ ಎಂದರು.

ಕರೊನಾ ನಿರ್ವಹಣೆ ಜತೆಜತೆಗೆ ಅಭಿವೃದ್ಧಿ ಕಾರ್ಯಗಳ ಸವಾಲು ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸಮರ್ಥ ಮಂತ್ರಿಗಳಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಮುಂದಿನ ಜಿಪಂ, ತಾಪಂ ಚುನಾವಣೆಗೆ ಪಕ್ಷವನ್ನು ತಳಮಟ್ಟದಿಂದಲೇ ಸಂಘಟಿಸಲಾಗುವುದು ಎಂದರು.

ಮೂರನೇ ಅಲೆ ಅಪಾಯ:

ಕರೊನಾ ಮೂರನೇ ಅಲೆ ಬಗ್ಗೆ ತಜ್ಞರು ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು. ನೆರೆ ರಾಜ್ಯಗಳಲ್ಲಿ ಈಗಾಗಲೇ ಮೂರನೆ ಅಲೆ ಸೋಂಕಿತ ಪ್ರಕರಣ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಸೋಂಕನ್ನು ಪರಿಣಾಮಕಾರಿ ನಿಯಂತ್ರಣ ಮಾಡಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಭಿಯಾನದ ಮಾದರಿಯಲ್ಲಿ ಕೋವಿಡ್ ಲಸಿಕೆ ಪೂರೈಸುತ್ತಿದೆ. ಪ್ರತಿಯೊಬ್ಬರೂ ಲಸಿಕೆ ಪಡೆದು ಕರೊನಾ ಸೋಂಕಿನಿಂದ ರಕ್ಷಣೆ ಪಡೆಯಬೇಕು ಎಂದು ಸಲಹೆ ನೀಡಿದರು.

ಮುಖ್ಯವಾಗಿ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಸೇರಿ ಕರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕು ಹರಡುವ ತೀವ್ರತೆಯನ್ನು ನಿಯಂತ್ರಣ ಮಾಡಬೇಕು ಎಂದರು.

ಕೋವಿಡ್ ಮೊದಲ ಡೋಸ್ ಪಡೆದವರು ತಪ್ಪದೆ ಕಾಲಾವಧಿಯಲ್ಲಿ ಎರಡನೇ ಡೋಸ್ ಪಡೆದುಕೊಳ್ಳಬೇಕು. ಒಂದೇ ಒಂದು ಇಂಜೆಕ್ಷನ್ ನಿಮ್ಮನ್ನು, ನಿಮ್ಮ ಕುಟುಂಬವನ್ನು ಪ್ರಾಣಾಪಾಯದಿಂದ ಪಾರು ಮಾಡುತ್ತದೆ. ಈ ಬಗ್ಗೆ ಯಾವುದೇ ಅಂಜಿಕೆ, ಅಪನಂಬಿಕೆ ಬೇಡ ಎಂದರು.

ಕರೊನಾ ಮೂರನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಲಸಿಕೆ ಪಡೆಯಲು ಮುಂದಾಗಿದ್ದಾರೆ. ಇದರಿಂದ ಸಹವಾಗಿ ಬೇಡಿಕೆಯೂ ಹೆಚ್ಚಾಗಿದೆ. ಸರ್ಕಾರಗಳು ಲಸಿಕೆ ಪೂರೈಸಲು ಅವಿರತ ಶ್ರಮಿಸುತ್ತಿವೆ ಎಂದರು.

ಲಸಿಕಾ ಅಭಿಯಾನ: ಕರೊನಾ ಎರಡನೇ ಅಲೆ ಆರಂಭದಿಂದ ಹೊಸಕೋಟೆ ತಾಲೂಕಿನಲ್ಲಿ ಎಂಟಿಬಿ ಚಾರಿಟಬಲ್ ಟ್ರಸ್ಟ್‌ನಿಂದ ನಡೆಸಿಕೊಂಡು ಬರುತ್ತಿರುವ ಉಚಿತ ವ್ಯಾಕ್ಸಿನ್ ಅಭಿಯಾನ ಮುಂದುವರೆದಿದ್ದು ಗುರುವಾರ ಸಚಿವರ ಪರವಾಗಿ ಖಾಜಿಹೊಸಹಳ್ಳಿ ಪಂಚಾಯಿತಿಯ ಕಟಿಗೇನಹಳ್ಳಿ ಗ್ರಾಮದಲ್ಲಿ ಜಿಪಂ ಮಾಜಿ ಸದಸ್ಯ ಸಿ.ನಾಗರಾಜ್ ಅಭಿಯಾನಕ್ಕೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net