

ಬೆಂಗಳೂರು ಗ್ರಾಮಾಂತರ: ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸರ್ಕಾರೇತರ ಸಂಘ-ಸಂಸ್ಥೆಗಳಿಗೆ ಮನವಿ ಮಾಡಿದರು.
ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೊನಾ ಸೋಂಕು ತಡೆಗಟ್ಟಲು ಸರ್ಕಾರೇತರ ಸಂಘ-ಸಂಸ್ಥೆಗಳು ಗ್ರಾಮೀಣ ಪ್ರದೇಶದಲ್ಲಿ ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ತಾಲೂಕು ಆಡಳಿತದೊಂದಿಗೆ ಸಮಾಲೋಚಿಸಿ ಆಹಾರ ಕಿಟ್, ಮಾಸ್ಕ್ ಮತ್ತಿತರ ವಸ್ತುಗಳನ್ನು ಎಲ್ಲರೂ ಒಟ್ಟಾಗಿ ಫಲಾನುಭವಿಗಳಿಗೆ ತಲುಪಿಸುವಂತೆ ಸೂಚನೆ ನೀಡಿದರು.
ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ ನೀಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲಿ ಹತ್ತು ಸಾವಿರ ಕೋವಿಡ್ ಮೆಡಿಕಲ್ ಕಿಟ್ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮೆಡಿಕಲ್ ಕಿಟ್ ಸಿದ್ಧಪಡಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಔಷಧಗಳ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಅವರು ಸ್ಪಷ್ಟಪಡಿಸಿದರು.
ಮೊಬೈಲ್ ಕ್ಲಿನಿಕ್ ಮೂಲಕ ವೈದ್ಯರ ತಂಡ ಈಗಾಗಲೇ ಜಿಲ್ಲೆಯ ನಾಲ್ಕು ತಾಲೂಕುಗಳ ಪ್ರತಿ ಹಳ್ಳಿಯನ್ನೂ ತಲುಪುತ್ತಿದೆ. ಗ್ರಾಮೀಣ ಜನರಿಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮೆಡಿಕಲ್ ಕಿಟ್ ತಲುಪಿಸಲಾಗುತ್ತಿದೆ. ಸೋಂಕಿನ ಲಕ್ಷಣಗಳು ಕಂಡಬಂದರೆ ಅಂಥವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲು ಸೂಚಿಸಲಾಗಿದೆ ಎಂದು ಕೆ. ಶ್ರೀನಿವಾಸ್ ಹೇಳಿದರು.
ಸ್ಥಳಕ್ಕೆ ತೆರಳಿ ಲಸಿಕೆ: ವೃದ್ಧಾಶ್ರಮ, ಅಂಗವಿಕಲರು ಹಾಗೂ ಬುದ್ಧಿಮಾಂದ್ಯರ ನಿಲಯಗಳಿಗೆ ತೆರಳಲಿರುವ ಜಿಲ್ಲಾಡಳಿತದ ತಂಡ, ಅವರೆಲ್ಲರಿಗೂ ಕರೊನಾ ಲಸಿಕೆ ಕೊಡಲಿದೆ ಎಂದು ಕೆ. ಶ್ರೀನಿವಾಸ್ ಸ್ಪಷ್ಟಪಡಿಸಿದರು.
ಪ್ರತಿಯೊಂದು ಲಸಿಕಾ ಕೇಂದ್ರದಲ್ಲಿ ಗರಿಷ್ಠ 200 ಮಂದಿಗೆ ವ್ಯಾಕ್ಸಿನ್ ನೀಡಲಾಗುವುದು. ಲಸಿಕಾ ಕೇಂದ್ರದಲ್ಲಿ ಹೆಚ್ಚೆಚ್ಚು ಜನರು ಸೇರುವುದು ಬೇಡ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ತಾಲೂಕಿಗೆ ಒಂದು ಸಹಾಯವಾಣಿ: ಅಂಗವಿಕಲರು ಹಾಗೂ ವೃದ್ಧರಿಗೆ ನೆರವಾಗುವಂತೆ ಪ್ರತಿ ತಾಲೂಕಿಗೆ ಒಂದರಂತೆ ಸಹಾಯವಾಣಿ ಕಾರ್ಯನಿರ್ವಹಿಸಬೇಕು. ತಾಲೂಕುಮಟ್ಟದಲ್ಲಿ ತಹಸೀಲ್ದಾರ್ ಇದರ ನೇತೃತ್ವ ವಹಿಸಿರಬೇಕು. ಅಲ್ಲದೆ, ಯಾವುದೇ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ಕೆ. ನಾಯಕ್ ಸಲಹೆ ನೀಡಿದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 56 ಆಂಬುಲೆನ್ಸ್‌ಗಳಿಗೆ ಜಿಪಿಎಸ್ ಸಾಧನ ಅಳವಡಿಸುವಂತೆ ಹೇಳಿದರು.
ಸಮನ್ವಯತೆ ಕಾಯ್ದುಕೊಳ್ಳಬೇಕು: ಸರ್ಕಾರೇತರ ಸಂಸ್ಥೆಗಳು ವೈಯಕ್ತಿಕವಾಗಿ ಕಾರ್ಯನಿರ್ವಹಿಸದೇ ಸಮಾಜ ಕಲ್ಯಾಣ ಇಲಾಖೆ, ಅಂಗವಿಕಲರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಆಡಳಿತದೊಂದಿಗೆ ಸಮನ್ವಯ ಕಾಯ್ದುಕೊಂಡು ಕೆಲಸ ಮಾಡಬೇಕು ಎಂದು ಜಿಪಂ ಸಿಇಒ ಎಂ.ಆರ್. ರವಿಕುಮಾರ್ ಹೇಳಿದರು.