

ಬೆಳಗಾವಿ: ಕರೊನಾ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಲಾಕ್‌ಡೌನ್ ವಿಸ್ತರಣೆ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರೊನಾ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ ಎಂದರು. ಈಗಾಗಲೇ ಕರೊನಾ ನಿಯಂತ್ರಣದ ಮೊದಲ ಲಸಿಕೆ ಪಡೆದ 45ರಿಂದ 60 ವರ್ಷದೊಳಗಿನವರಿಗೆ ಎರಡನೇ ಡೋಸ್ ನೀಡುವುದು ಸರ್ಕಾರದ ಆದ್ಯತೆಯಾಗಿದೆ. ಇದಾದ ಬಳಿಕ 18ರಿಂದ 44 ವರ್ಷದೊಳಗಿನವರಿಗೆ ನೀಡುತ್ತೇವೆ. ಇದಕ್ಕಾಗಿ ರಾಜ್ಯಕ್ಕೆ 3 ಕೋಟಿ ಲಸಿಕೆ ಖರೀದಿಗೆ ಆದೇಶ ಕೊಟ್ಟಿದ್ದೇವೆ. ಸರ್ಕಾರದ ಬೇಡಿಕೆಗೆ ತಕ್ಕಂತೆ ಕರೊನಾ ಲಸಿಕೆಗಳು ಪೂರೈಕೆಯಾಗಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗಳಿಗೆ ಸದ್ಯಕ್ಕೆ ಲಸಿಕೆ ಪೂರೈಸುವುದಿಲ್ಲ. ಲಸಿಕೆ ತಯಾರಿಸುವುದಕ್ಕೆ ಕಂಪನಿಗಳಿಗೆ ಸಮಯ ಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಸಚಿವ ಕಾರಜೊಳ ಉತ್ತರಿಸಿದರು.
ಬೆಳಗಾವಿ: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಪ್ರತಿ ನಿಮಿಷಕ್ಕೆ 700 ಲೀಟರ್ ಆಮ್ಲಜನಕ ಉತ್ಪಾದಿಸುವ ಆಧುನಿಕ ತಂತ್ರಜ್ಞಾನದ ಘಟಕ ನಿರ್ಮಾಣಕ್ಕೆ ಶಾಸಕ ಅಭಯ ಪಾಟೀಲ ಶುಕ್ರವಾರ ಶಂಕು ಸ್ಥಾಪನೆ ನೆರವೇರಿಸಿದರು. ಎಲ್ ಆ್ಯಂಡ್ ಟಿ ಕಂಪನಿ ವತಿಯಿಂದ ನಿರ್ಮಾಣಗೊಳ್ಳಲಿರುವ ಈ ಘಟಕವು, ಸರ್ಕಾರಿ ಆಸ್ಪತ್ರೆಯಲ್ಲಿ ನಿಮಾರ್ಣಗೊಳ್ಳುತ್ತಿರುವ ಕರ್ನಾಟಕ ಪ್ರಥಮ ಸೆಂಟರ್ ಆಗಿದೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ 20 ದಿನದಲ್ಲಿ ನಿರ್ಮಾಣವಾಗಲಿದೆ. 50 ಚದರ್ ಅಡಿ ಜಾಗದಲ್ಲಿ ಯಂತ್ರ ಅಳವಡಿಸಲಾಗುವುದು. ಸುಮಾರು 50ರಿಂದ 60 ಹಾಸಿಗೆಗಳಿಗೆ ನಿರಂತರ ಆಮ್ಲಜನಕ ಸರಬರಾಜು ಮಾಡಬಹುದಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು. ಎಲ್ ಆ್ಯಂಟ್ ಟಿ ಕಂಪನಿ ವ್ಯವಸ್ಥಾಪಕ ಹಾರ್ದಿಕ ದೇಸಾಯಿ, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ, ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೊಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ವಿ. ಮುನ್ಯಾಳ, ಪಾಲಿಕೆ ಆರೋಗ್ಯಾಧಿಕಾರಿ ಡಾ. ಸಂಜಯ ಡುಮ್ಮಗೋಳ ಇತರರಿದ್ದರು.